ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆ ಮತ್ತು ಆರಂಭಿಕ ಜಾತ್ರೆ ಎಂದು ಕರೆಸಿಕೊಳ್ಳುವ ಹಾವೇರಿ ಹುಕ್ಕೇರಿ ಮಠದ ಜಾತ್ರೆ ವಿಜೃಂಭಣಿಯಿಂದ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಲಿಂಗೈಕ್ಯ ಶಿವಬಸವಶ್ರೀ ಮತ್ತು ಶ್ರೀ ಶಿವಲಿಂಗಶ್ರೀ ಭಾವಚಿತ್ರದ ಮೆರವಣಿಗೆಯ ಉತ್ಸವ ನಡೆಸಲಾಯಿತು. ಉತ್ಸವದ ಮೆರವಣಿಗಿಗೆ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಚಾಲನೆ ನೀಡಿದರು.
ಮಠದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗಿಯಲ್ಲಿ ಪಾಲ್ಗೊಂಡ ವಿವಿಧ ಕಲಾತಂಡಗಳು ತಮ್ಮ ಕಲಾಪ್ರದರ್ಶನ ಮಾಡುವ ಮೂಲಕ ಗಮನಸೆಳೆದವು. ನಂದಿಕುಣಿತ, ಮಹಿಳೆಯರ ಡೊಳ್ಳುಕುಣಿತ, ಜಾಂಜಮೇಳ, ಪುರವಂತಿಕೆ ಮೇಳಗಳು ಗಮನಸೆಳೆದವು. ಉಡುಪಿಯಿಂದ ಆಗಮಿಸಿದ್ದ ಹುಲಿವೇಷಧಾರಿಗಳ ಕುಣಿತ ನೋಡುಗರ ಮೆಚ್ಚುಗಿಗೆ ಪಾತ್ರವಾಯಿತು.
ಹುಕ್ಕೇರಿಮಠದಿಂದ ಆರಂಭವಾದ ಭಾವಚಿತ್ರಗಳ ಮೆರವಣಿಗೆ ಮೇಲಿನಪೇಟೆ, ಹಳೇಊರು, ದೇಸಾಯಿಗಲ್ಲಿ, ಬಸ್ತಿಬಾವಿ ಸೇರಿದಂತೆ ಹಾವೇರಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಂಚರಿಸಿತು. ಉತ್ಸವದಲ್ಲಿ ಲಿಂಗೈಕ್ಯ ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಭಾವಚಿತ್ರಕ್ಕೆ ಭಕ್ತರು ನಮನ ಸಲ್ಲಿಸಿದರು. ಇಷ್ಟದ ದೈವಕ್ಕೆ ಹಣ್ಣುಕಾಯಿ ಒಡೆದು ಕರ್ಪೂರ ಬೆಳಗಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಭಾವಚಿತ್ರದ ಮೆರವಣಿಗೆಯಲ್ಲಿ ಮಕ್ಕಳಿಗೆ ಹಾಕಿದ್ದ ಬಸವೇಶ್ವರ, ಅಕ್ಕಮಹಾದೇವಿ, ಸ್ವಾಮಿ ವಿವೇಕಾನಂದ ಮತ್ತು ಸರ್ವಜ್ಞರ ವೇಷಭೂಷಣಗಳು ಗಮನಸೆಳೆದವು.
ಕೆಲಕಾಲ ಭಾವಚಿತ್ರದ ಮೆರವಣಿಗೆಯಲ್ಲಿ ಸದಾಶಿವಶ್ರೀ ಸೇರಿದಂತೆ ವಿವಿಧ ಮಠಾಧೀಶರು ಹೆಜ್ಜೆ ಹಾಕಿದರು. ಉತ್ಸವಕ್ಕೆ ವಿವಿಧ ಪುಷ್ಪಗಳಿಂದ ಮಾಡಿದ ಅಲಂಕಾರ ಗಮನಸೆಳೆಯಿತು. ಉತ್ಸವ ಬರುವ ಮಾರ್ಗದಲ್ಲಿ ಭಕ್ತರು ತಳಿರುತೋರಣಗಳಿಂದ ಅಲಂಕರಿಸಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಹುಕ್ಕೇರಿಮಠದಲ್ಲಿರುವ ಲಿಂಗೈಕ್ಯ ಶಿವಬಸವ ಮತ್ತು ಲಿಂಗೈಕ್ಯ ಶಿವಲಿಂಗಶ್ರೀಗಳ ಗದ್ದುಗಿಗೆ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.
ಉಭಯಶ್ರೀಗಳ ಗದ್ದುಗಿಗೆ ಮುಂಜಾನೆಯಿಂದ ವಿವಿಧ ಅಭಿಷೇಕ ಸಲ್ಲಿಸಲಾಯಿತು. ಹಾವೇರಿ ಸೇರಿದಂತೆ
ಸುತ್ತಮುತ್ತಲ ಭಕ್ತರು ಮುಂಜಾನೆಯಿಂದಲೇ ಸರತಿಯಲ್ಲಿ ನಿಂತು ದರ್ಶನ ಪಡೆದರು. ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ಧಾರ್ಮಿಕ, ಸಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾವೇರಿ ಹುಕ್ಕೇರಿಮಠ ಸಾಕ್ಷಿಯಾಯಿತು. ಉಭಯಶ್ರೀಗಳ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಸುತ ವರ್ಷದ ಹಾವೇರಿಯ ನಮ್ಮೂರು ಜಾತ್ರೆಗೆ ವಿದ್ಯುಕ್ತ ತೆರೆ ಬಿದ್ದಿತು. ಜಾತ್ರಾ ಮಹೋತ್ಸವದ ಅಂಗವಾಗಿ ಹುಕ್ಕೇರಿಮಠಕ್ಕೆ ಮಾಡಿದ ವಿದ್ಯುತ್ ದೀಪಾಲಂಕಾರ ಆಕರ್ಷಣೀಯವಾಗಿತ್ತು.
ಹುಕ್ಕೇರಿಮಠ ಮತ್ತು ತೋಟಗಾರಿಕಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ದಾಸೋಹ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನ ಹೂವು ಹಣ್ಣುಗಳ ಲೋಕವನ್ನೇ ಅನಾವರಣಗೊಳಿಸಿತ್ತು.
ಇದನ್ನೂ ಓದಿ: ಶ್ರೀರಾಮನ ಶರದಿಂದ ಹುಟ್ಟಿದ ಶರಾವತಿ ನದಿ ಜನ್ಮಸ್ಥಳದ ಬಗ್ಗೆ ಗೊತ್ತಾ?