ಹಾವೇರಿ: ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಜೊತೆಗೆ ಪ್ರಯಾಣದ ವೇಳೆ ಮಕ್ಕಳನ್ನ ಅಪಾಯದಿಂದ ಪಾರು ಮಾಡಲು ಸುರಕ್ಷತಾ ಸಾಮಗ್ರಿ ಬಳಕೆ ಕುರಿತು ಹಾವೇರಿ ರಸ್ತೆ ಸುರಕ್ಷತಾ ಸಮಿತಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.
ನಗರದ ವಾಲ್ಮಿಕಿ ವೃತ್ತದಲ್ಲಿ ನಡೆದ ಅರಿವು ಕಾರ್ಯಕ್ರಮಕ್ಕೆ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಚಾಲನೆ ನೀಡಿದರು. ನಂತರ ಪ್ರಾದೇಶಿಕ ಸಾರಿಗೆ ಇಲಾಖೆ ನಿರ್ದೇಶಕ ವಸೀಂಬಾಬಾ ಬೈಕ್ ಸವಾರರಿಗೆ ಮಕ್ಕಳಿಗೆ ಸುರಕ್ಷತಾ ಸಾಮಗ್ರಿಗಳ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು.
''ಸವಾರರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು. ಇನ್ನು ಚಿಕ್ಕಮಕ್ಕಳನ್ನು ಸೀಟಿನಲ್ಲಿ ಅಥವಾ ಕಂಕುಳಲ್ಲಿ ಕುರಿಸಿಕೊಂಡು ಪ್ರಯಾಣ ಮಾಡುತ್ತಾರೆ. ಈ ರೀತಿ ಸಂಚರಿಸುವ ವೇಳೆ ಮಕ್ಕಳು ನಿದ್ದೆಗೆ ಜಾರುತ್ತಾರೆ. ಮಕ್ಕಳು ಬೈಕ್‌ಗಳಿಂದ ಕೆಳಗೆ ಬೀಳದಂತೆ ತಡೆಯಲು ಹೋಗಿ ಬೈಕ್ ಅಪಘಾತಗಳಾದ ಉದಾಹರಣೆಗಳು ಅನೇಕ ಇವೆ. ಮಕ್ಕಳ ಸುರಕ್ಷತಾ ಸಾಮಗ್ರಿ ಪರಿಚಯಿಸಲಾಗುತ್ತಿದೆ'' ಎಂದು ಹಾವೇರಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ತಿಳಿಸಿದರು.
''ಹಾವೇರಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿವೆ. ರಸ್ತೆ ಅಪಘಾತಗಳಲ್ಲಿ ಶೇ. 85 ರಷ್ಟು ಪಾಲು ದ್ವಿಚಕ್ರವಾಹನ ಸವಾರರಿಗೆ ಸಂಬಂಧಿಸಿದವು ಇರುತ್ತವೆ. ಕೆಲವೊಮ್ಮೆ ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಹಾಕಿದ್ದರೂ ಚಿಕ್ಕಮಕ್ಕಳನ್ನು ಕರೆದೊಯ್ಯುವಾಗ ಯಾವುದೇ ರೀತಿಯ ಸುರಕ್ಷತಾ ಸಾಮಗ್ರಿಗಳನ್ನು ಬಳಕೆ ಮಾಡುವುದಿಲ್ಲ. ಈ ರೀತಿಯಾದಾಗ ಹೆಚ್ಚಿನ ಅನಾಹುತಗಳು ಸಂಭವಿಸುತ್ತವೆ. ಇದನ್ನು ತಡೆಯಲು ಮಕ್ಕಳ ಸುರಕ್ಷತಾ ಸಾಮಗ್ರಿ ಬಳಕೆ ಮಾಡಬೇಕಿದೆ'' ಎಂದು ವಸೀಂಬಾಬಾ ಸಲಹೆ ನೀಡಿದರು.
ಬೆಳಗಾವಿ ವಿಭಾಗಮಟ್ಟದ ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಓಂಕಾರೇಶ್ವರಿ ಮಾತನಾಡಿ, ''ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹಾವೇರಿಯಲ್ಲಿ ಮಕ್ಕಳ ಸುರಕ್ಷತಾ ಸಾಮಗ್ರಿಗಳ ಅರಿವು ಮೂಡಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸುಮಾರು 30 ಕೆಜಿ ತೂಕ ತಡೆಯುವ ಸುರಕ್ಷತಾ ಸಾಮಗ್ರಿಗಳು ಇವಾಗಿವೆ. 9 ತಿಂಗಳ ಮಗುವಿನಿಂದ ಹಿಡಿದು ನಾಲ್ಕು ವರ್ಷದ ಮಗುವಿನವರೆಗೆ ಇವುಗಳನ್ನು ಬಳಕೆ ಮಾಡಬಹುದು'' ಎಂದರು.
''ಹಾವೇರಿಯ ಬೈಕ್ ಡಿಲರ್ಸ್ ಹೊಸ ಸಾಮಗ್ರಿ ವಿತರಣೆಗೆ ಸಹಕಾರ ನೀಡಿದ್ದು, ಈಗಾಗಲೇ ಸಾಮಗ್ರಿ ವಿತರಿಸುತ್ತಿರುವುದು ಸಂತಸ ತಂದಿದೆ. ಜೊತೆಗೆ ಚಿಕ್ಕಮಕ್ಕಳಿಗೆ ಈಗ ಸೈಕಲ್ ಸವಾರಿ ಮಾಡುವಾಗ ಬಳಸುವ ಹೆಲ್ಮೆಟ್ನ್ನೇ ಉಪಯೋಗಿಸಲು ಅನುಮತಿ ನೀಡಲಾಗಿದೆ. ಮುಂದೆ ಸರ್ಕಾರದ ನಿಯಮದಂತೆ ಹೊಸ ಹೆಲ್ಮೆಟ್ ಧರಿಸಲು ವ್ಯವಸ್ಥೆ ಮಾಡುವುದು'' ಎಂದು ಅವರು ತಿಳಿಸಿದರು.
ನೂತನವಾಗಿ ಬೈಕ್ ಖರೀದಿಸಿ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ನೀಡಲಾಯಿತು. ಸುಮಾರು 900 ರೂಪಾಯಿ ಹೆಚ್ಚುವರಿ ಶುಲ್ಕ ಪಡೆದು ಮಕ್ಕಳ ಸುರಕ್ಷತಾ ಸಾಮಗ್ರಿಗಳನ್ನು ನೀಡಲಾಯಿತು. ಹಾವೇರಿ ಎಸ್ಪಿ ಅಂಶುಕುಮಾರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ನಾನು ಬಸವಾದಿ ಶರಣರ ಅನುಯಾಯಿ: ಸಿಎಂ ಸಿದ್ದರಾಮಯ್ಯ