ಬೆಂಗಳೂರು: "ಹಾಸನದ ವಿಚಾರಗಳು ಒಂದು ರೀತಿಯಲ್ಲಿ ಸೂಕ್ಷ್ಮವಾಗಿವೆ. ಬಹಳ ಎಚ್ಚರಿಕೆಯಿಂದ ಈ ವಿಚಾರದಲ್ಲಿ ಎಸ್ಐಟಿಯವರು ಹೆಜ್ಜೆ ಇಡಬೇಕಾಗುತ್ತದೆ" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ನಿನ್ನೆ ಹಾಸನದಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿ, ಹೆಣ್ಣುಮಕ್ಕಳ ವಿಚಾರ, ಅವರ ಭವಿಷ್ಯ, ಅವರ ಕುಟುಂಬದ ವಿಚಾರ ಇದೆ. ಈ ವಿಚಾರದಲ್ಲಿ ಹೇಗೆಂದರೆ ಹಾಗೆ ಮಾತಾಡಲು ಆಗಲ್ಲ. ಈ ವಿಚಾರದಲ್ಲಿ ಎಸ್ಐಟಿಯವರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಸಾರ್ವಜನಿಕ ಹೇಳಿಕೆ ಬದಲು ಸತ್ಯಾಂಶ ಪರಿಗಣಿಸಿ ತನಿಖೆ ನಡೆಯಲಿದೆ" ಎಂದರು.
ನಿಗಮ ಮಂಡಳಿಗಳ ನಿರ್ದೇಶಕರು, ಸದಸ್ಯರ ನೇಮಕಕ್ಕೆ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ನನ್ನ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ. ಒಂದು ತಿಂಗಳಲ್ಲಿ ಪಟ್ಟಿ ಕೊಡಲು ಹೇಳಿದ್ದಾರೆ. ಒಂದು ತಿಂಗಳಿಗೂ ಮುನ್ನವೇ ನಿರ್ದೇಶಕರು, ಸದಸ್ಯರ ಪಟ್ಟಿ ಕೊಡುತ್ತೇನೆ" ಎಂದರು.
ಹಿರಿಯ ಶಾಸಕರಿಗೆ ಸಚಿವ ಸ್ಥಾನಕ್ಕೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, "ಇದರ ಬಗ್ಗೆ ನಾನೇನೂ ಹೇಳಲ್ಲ. ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನಗೆ ಅಭ್ಯಾಸ ಇದೆ, ಅನುಭವ ಇದೆ, ಆಯ್ಕೆಯಲ್ಲಿ ಯಾವುದೇ ತೊಂದರೆ ಆಗಲ್ಲ" ಎಂದರು.
ನೀಟ್ ಅಕ್ರಮದ ಬಗ್ಗೆ ಪಿಎಂ ಮೋದಿ ಮೌನವಹಿಸಿರುವ ಕುರಿತು ಮಾತನಾಡಿ, "ಇಡೀ ದೇಶದಲ್ಲಿ ನಾವು ಬೊಬ್ಬೆ ಹೊಡೆಯುತ್ತಿದ್ದೇವೆ. ಆದರೆ ಬಿಜೆಪಿಯವರಿಗೆ ಈ ಅಕ್ರಮ ಏನೂ ಅನಿಸೇ ಇಲ್ಲ. ಮರು ಪರೀಕ್ಷೆ ಆಗಬೇಕು, ತನಿಖೆ ಆಗಬೇಕು. ಆದರೆ ಇದರ ಬಗ್ಗೆ ಮೋದಿಯವರು ಏನೂ ಹೇಳ್ತಿಲ್ಲ. ಮಕ್ಕಳು ಗೊಂದಲದಲ್ಲಿದ್ದಾರೆ. ಇದರ ಜವಾಬ್ದಾರಿಯನ್ನು ಕೇಂದ್ರದವರು ಹೊತ್ಕೋಬೇಕಲ್ಲ. ಆದರೆ ಏನೂ ಮಾಡದೇ ಸುಮ್ಮನಿರೋದು ಸರಿಯಲ್ಲ" ಎಂದು ಟೀಕಿಸಿದರು.
50 ವರ್ಷದ ಹಿಂದಿನ ವಿಚಾರ ಈಗ್ಯಾಕೆ: ತುರ್ತುಪರಿಸ್ಥಿತಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕ್ಷಮೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, "ದೇಶದಲ್ಲಿ ಜ್ವಲಂತ ಸಮಸ್ಯೆಗಳು ಹಲವಾರು ಇವೆ. ಹಲವು ಸಮಸ್ಯೆಗಳು ಪರಿಹಾರ ಆಗಬೇಕಿದೆ. ನೀಟ್ನಂಥ ಸಂಸ್ಥೆಗಳನ್ನು ಮಾಡಿ ಮಕ್ಕಳ ಭವಿಷ್ಯ ಹಾಳು ಮಾಡ್ತಿದ್ದಾರೆ. ಉದ್ಯೋಗ ಸಮಸ್ಯೆ ಇದೆ. ಇದೆಲ್ಲ ಬಿಟ್ಟು ಐವತ್ತು ವರ್ಷಗಳ ಹಿಂದಿನ ತುರ್ತುಪರಿಸ್ಥಿತಿ ಬಗ್ಗೆ ಇವತ್ತು ಮಾತಾಡುತ್ತಿದ್ದಾರೆ. ಬಿಜೆಪಿಯವರಿಗೆ ಜನ, ದೇಶದ ಭವಿಷ್ಯ ಬಗ್ಗೆ ಕಾಳಜಿ ಇಲ್ಲ. ಬ್ರಿಟಿಷರು ಇನ್ನೂರು ವರ್ಷ ದೇಶ ಆಳಿ ಹೋಗಿದ್ದಾರೆ. ಹಾಗೆ ನೋಡಿದರೆ ಬ್ರಿಟಿಷರಿಂದಲೂ ಕ್ಷಮೆ ಕೇಳಿಸಬೇಕು. ಇಲ್ಲಿ ಬಂದು ಆಳಿದ್ರಿ, ನಮ್ಮ ಸಂಪತ್ತು ತಗೊಂಡ್ ಹೋದ್ರಿ, ಕ್ಷಮೆ ಕೇಳಿ ಅಂತ ಬ್ರಿಟಿಷರಿಗೂ ಹೇಳಬೇಕಾಗುತ್ತದೆ. ಬಿಜೆಪಿಯವ್ರು ಹಿಂದೆಲ್ಲ ಏನೆಲ್ಲ ಮಾಡಿದ್ರೋ ಅದಕ್ಕೆಲ್ಲ ಕ್ಷಮೆ ಕೇಳಿ ಅಂತ ನಾವೂ ಹೇಳಬೇಕಾಗುತ್ತದೆ. ಗೋಧ್ರಾದಲ್ಲಿ 3 ಸಾವಿರ ಜನರ ಹತ್ಯೆ ಆಯ್ತು. ಬಿಜೆಪಿಯವರು ಯಾರಾದರೂ ಕ್ಷಮೆ ಕೇಳಿದ್ದಾರಾ. ಸುಮ್ನೆ ಆಡಳಿತ ಮಾಡಲಿ" ಇವರು ಎಂದು ವಾಗ್ದಾಳಿ ನಡೆಸಿದರು.
ತನಿಖಾ ತಂಡ ಕೈಗೊಂಡ ನಿರ್ಧಾರವದು: ನಾಲ್ವರು ರೇಣುಕಾಸ್ವಾಮಿ ಹತ್ಯೆ ಆರೋಪಿಗಳು ತುಮಕೂರು ಜೈಲಿಗೆ ಸ್ಥಳಾಂತರ ವಿಚಾರವಾಗಿ ಮಾತನಾಡಿ, "ಇದು ನಮ್ಮ ತನಿಖಾ ಏಜೆನ್ಸಿ ಎಸ್ಐಟಿ ತಗೊಂಡಿರುವ ತೀರ್ಮಾನ. ಆರೋಪಿಗಳೆಲ್ಲ ಒಟ್ಟಾಗಿದ್ದರೆ ಸರಿಯಲ್ಲ ಅಂತ ಅನಿಸಿರಬೇಕು. ಹೀಗಾಗಿ ಅಲ್ಲಿಗೆ ಸ್ಥಳಾಂತರ ಮಾಡಿದ್ದಾರೆ. ದರ್ಶನ್ ಅವರನ್ನು ಸ್ಥಳಾಂತರ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ" ಎಂದರು.
ಪ್ರಬುದ್ಧ ಕೊಲೆ ಪ್ರಕರಣ ಸಿಐಡಿಗೆ ವಹಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, "ಪ್ರಬುದ್ಧ ಅವರ ತಾಯಿಗೆ ಈಗ ನಡೆಯುತ್ತಿರುವ ತನಿಖೆ ಸಮಾಧಾನ ತಂದಿಲ್ಲ. ಹಾಗಾಗಿ ಅವರು ನನ್ನ ಬಳಿಯೂ ಬಂದಿದ್ದು, ನಾನು ಸಿಎಂ ಜತೆ ಮಾತನಾಡುವುದಾಗಿ ಹೇಳಿದ್ದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಐಡಿಗೆ ಕೊಡುವ ತೀರ್ಮಾನ ಮಾಡಿದ್ದಾರೆ. ತನಿಖೆಯನ್ನು ಸಿಐಡಿ ಮುಂದುವರೆಸಲಿದೆ" ಎಂದರು.
ತುಮಕೂರು ಬಂದ್ ವಿಚಾರವಾಗಿ ಮಾತನಾಡಿ, "ಮೊನ್ನೆ ನೀರಾವರಿ ಸಚಿವರಾದ ಡಿಸಿಎಂ ಅವರೇ ಸಭೆ ಕರೆದಿದ್ದರು. ಜಿಲ್ಲೆಯ ಎಲ್ಲಾ ಶಾಸಕರು ಕರೆದು ಯಾರು ಪರಿಣತರು ಇದ್ದಾರೆ, ಎಲ್ಲರಿಗೂ ಅದರ ವಿಚಾರ ತಿಳಿಸಿದ್ರು. ಯಾರಿಗೂ ತೊಂದರೆ ಆಗೋದಿಲ್ಲ. ನೀರನ್ನು ಹಂಚುವಾಗ ನಿಮಗೂ ಅದರ ಪಾಲು ಸಿಗುತ್ತೆ ಎಂಬ ಭರವಸೆ ಕೊಟಿದ್ದರು. ಆಗ ಒಪ್ಪಿಕೊಂಡರು, ಆದರೆ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ನೋಡೋಣ ಮುಂದೆ ಏನು ಮಾಡಬೇಕು ಅಂತ. ನೀರಾವರಿ ಸಚಿವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ" ಎಂದರು.