ಹಾಸನ: 12 ದಿನಗಳ ದರ್ಶನ ಭಾಗ್ಯ ಕರುಣಿಸಿದ ಅಧಿದೇವತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಇಂದು ಮಧ್ಯಾಹ್ನ 12.33ಕ್ಕೆ ಮುಚ್ಚಲಾಯಿತು.
ಬೆಳಗ್ಗೆ ಪೂಜೆ, ನೈವೇದ್ಯಕ್ಕಾಗಿ ಸಾರ್ವಜನಿಕ ದರ್ಶನ ಬಂದ್ ಆಗಿತ್ತು. ಸಂಪ್ರದಾಯದಂತೆ ಪೂಜೆ, ನೈವೇದ್ಯ ನೆರವೇರಿಸಿ ನಂದಾದೀಪ ಹಚ್ಚಿಟ್ಟ ಅರ್ಚಕರು ಜಿಲ್ಲಾಡಳಿತದ ಅಧಿಕಾರಿಗಳ ಸಮಕ್ಷಮದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಿ ಕೀಲಿ ಕೈ ಅನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು. ಆದ್ದರಿಂದ ಸಾವಿರಾರು ಭಕ್ತರು ದರ್ಶನ ಸಾಧ್ಯವಾಗದೇ ನಿರಾಸೆ ಅನುಭವಿಸಿದರು. ಆದರೂ ಕಾದು ಕುಳಿತು ದರ್ಶನಕ್ಕಾಗಿ ಅವಕಾಶ ಕೇಳಿದ ಭಕ್ತರ ಕೋರಿಕೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಾಲಿನಲ್ಲಿ ನಿಂತವರಿಗೆ ದೇವಿ ವಿಶ್ವರೂಪ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು.
ಜಿಲ್ಲಾ ಉಸ್ತುವಾರಿ ಸಚಿವ ಗೈರು: ಅ.24 ರಂದು ಹಾಸನಾಂಬೆ ದರ್ಶನ ಪ್ರಾರಂಭದ ದಿನ ಮತ್ತು ಅ.28 ರಂದು ಸಿಎಂ ಬಂದಾಗ ಹಾಜರಿದ್ದ ಸಚಿವ ಕೆ.ಎನ್.ರಾಜಣ್ಣ, ಬಾಗಿಲು ಮುಚ್ಚುವ ವೇಳೆ ಗೈರಾಗಿದ್ದರು. ದರ್ಶನದ ಕೊನೆಯ ನಾಲ್ಕು ದಿನಗಳು ಜಿಲ್ಲಾಡಳಿತಕ್ಕೆ ಭಕ್ತರು ಹಿಡಿಶಾಪ ಹಾಕಿದ್ದಲ್ಲದೇ, ಲಕ್ಷಾಂತರ ಪಾಸ್ಗಳನ್ನು ತುಮಕೂರು ಮತ್ತು ಬೆಂಗಳೂರು ಭಾಗದ ಜನರಿಗೆ ಮನಸೋಇಚ್ಛೆ ಹಂಚಿಕೆ ಮಾಡಿದ ಆರೋಪದಲ್ಲಿ ಪಾಸ್ ರದ್ದು ಮಾಡಿದ್ದರು. ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣನೇ ಕಾರಣ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕೆ. ಎನ್. ರಾಜಣ್ಣ, ಹಾಸನ ಜನತೆಗೆ ಉತ್ತರಿಸಲಾಗದೇ, ಅನಾರೋಗ್ಯ ನೆಪವೊಡ್ಡಿ ಹಾಸನಾಂಬ ದರ್ಶನದ ಅಂತಿಮ ದಿನವಾದ ಇಂದು ಮತ್ತು ನ.1ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಗೈರಾಗಿದ್ದರು.
ಇದಕ್ಕೂ ಮುನ್ನ ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಆವರಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ವೈಭವದ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಭಾನುವಾರ ಮುಂಜಾನೆ ಸಂಪನ್ನಗೊಂಡಿತು.
ಶನಿವಾರ ರಾತ್ರಿ 10 ಗಂಟೆಗೆ ಶ್ರೀ ಸಿದ್ದೇಶ್ವರ ಮತ್ತು ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುಂಜಾನೆ 5 ಗಂಟೆಗೆ ದೇವಾಲಯಕ್ಕೆ ಮರಳಿತು. ಇದೇ ವೇಳೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ದೇವಾಲಯದ ಅರ್ಚಕ ಪ್ರಕಾಶ್ ಜೊತೆಗೂಡಿ ಕೆಂಡೋತ್ಸವದಲ್ಲಿ ಪಾಲ್ಗೊಂಡರು.
ಒಂಬತ್ತು ದಿನಗಳ ಕಾಲ ಅಧಿದೇವತೆ ದರ್ಶನ ಭಾಗ್ಯ ನೀಡಿದ್ದು, ಈ ಬಾರಿ 12-13 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಅಲ್ಲದೇ ಈ ಬಾರಿ ದೇವಾಲಯದ 1000 ಮತ್ತು 300 ರೂ. ಪಾಸ್, ದರ್ಶನದ ಟಿಕೆಟ್ ಮತ್ತು ಲಾಡು ಪ್ರಸಾದದಿಂದ ದೇವಾಲಯಕ್ಕೆ 9 ಕೋಟಿ ರೂ. ಹಣ ಸಂಗ್ರಹವಾಗಿದೆ.
ಹಾಸನಾಂಬೆ ತಾಯಿಯ ಬಾಗಿಲು ಮುಚ್ಚುವ ವೇಳೆ, ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಹೆಚ್.ಪಿ. ಸ್ವರೂಪ್ ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ, ದೇವಾಲಯದ ಆಡಳಿತಾಧಿಕಾರಿ ಮಾರುತಿ ಹಾಜರಿದ್ದರು.
ಇದನ್ನೂ ಓದಿ: ಗರ್ಭ ಗುಡಿ ಬಾಗಿಲು ಓಪನ್ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ