ಬೆಳಗಾವಿ: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದಾರೆ. ಹಲವು ಗಣ್ಯರು ಕೃಷ್ಣರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅವರ ಸಂಪುಟದಲ್ಲಿ ಸಚಿವರಾಗಿದ್ದ ಹೆಚ್.ವಿಶ್ವನಾಥ್ ಅವರು ಕೃಷ್ಣ ಆಡಳಿತ ವೈಖರಿ ಬಗ್ಗೆ ಈಟಿವಿ ಭಾರತದ ಜೊತೆ ಮನಬಿಚ್ಚಿ ಮಾತನಾಡಿದರು.
ಕೃಷ್ಣ ಅವಧಿಯಲ್ಲಿ ಜನರಿಗೆ ವಿಶ್ವಾಸದ ಆಡಳಿತ ನೀಡಲಾಗುತ್ತಿತ್ತು. ಈಗ ಭ್ರಷ್ಟ ವಿಶ್ವಾಸದ ಆಡಳಿತವಿದೆ. ವ್ಯತ್ಯಾಸ ಅಷ್ಟೇ, ಬೇರೇನೂ ಇಲ್ಲ. ಎಲ್ಲ ಕಾಲದಲ್ಲೂ ಭ್ರಷ್ಟಾಚಾರವಿತ್ತು. ಇಲ್ಲ ಅಂತಲ್ಲ. ಆದರೆ ಈಗಿನ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ ಎಂದರು.
ಸಂಪುಟ ಸಹೋದ್ಯೋಗಿಗಳನ್ನು ಎಸ್.ಎಂ.ಕೃಷ್ಣ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿದ್ದರು. ನಾನೂ ಕೂಡ ಅವರ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೆ. ಚೆನ್ನಾಗಿ ಕೆಲಸ ಮಾಡುವಂತೆ ಹೇಳುತ್ತಿದ್ದರು. ಅಧಿಕಾರ ಎಂಬುದು ಒಂದು ಜವಾಬ್ದಾರಿ. ಜನತಂತ್ರ ವ್ಯವಸ್ಥೆಯಲ್ಲಿ ಜನ ನಮಗೆ ಜವಾಬ್ದಾರಿ ನೀಡಿದ್ದಾರೆ. ಅದು ಅಧಿಕಾರವಲ್ಲ. ಆ ಜವಾಬ್ದಾರಿಯನ್ನು ಜತನದಿಂದ ಪಾಲಿಸಬೇಕು ಎನ್ನುತ್ತಿದ್ದರು ಎಂದು ಸ್ಮರಿಸಿದರು.
ಕೃಷ್ಣ ನಿಧನ ನನಗೆ ಬಹಳ ನೋವು ತಂದಿದೆ. ಕೆಲವು ಕಾರಣಗಳಿಂದ ಅವರು ಬಿಜೆಪಿ ಸೇರಿದ್ದರು. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅವರ ಜೊತೆ ಬಹಳ ಒಡನಾಟದಲ್ಲಿದ್ದೆ. ಮೂರು ತಿಂಗಳ ಹಿಂದೆ ಸುಮಾರು ಹೊತ್ತು ಕೂತು ಅವರ ಬಳಿ ಮಾತನಾಡಿದ್ದೆ. ಕಾಯಿಲೆ ಇದ್ದರೂ ಅದೇ ಡ್ರೆಸ್ ಕೋಡ್‌ನಲ್ಲಿ ಬಂದು ಮಾತನಾಡಿದ್ದರು. ಅವರನ್ನು ವೈಟ್ ಕಾಲರ್ ರಾಜಕಾರಣಿ ಅಂತ ಕರೆಯುತ್ತಿರಬಹುದು. ಆದರೆ ಅವರೊಬ್ಬ ಬಹಳ ಶಿಸ್ತು, ಸಭ್ಯತೆಯ ವ್ಯಕ್ತಿಯಾಗಿದ್ದರು ಎಂದರು.
ಎಸ್.ಎಂ.ಕೃಷ್ಣ ಆಡಳಿತ ಕಾರ್ಯವಿಧಾನ ಬಹಳ ಸಂಸ್ಕೃತಿ ಸಂಸ್ಕಾರಯುತವಾಗಿತ್ತು. ಯಾರೊಂದಿಗೂ ಕೂಡ ಗಟ್ಟಿಯಾಗಿ ಮಾತನಾಡಿಲ್ಲ. ಯಾರನ್ನೂ ಉದ್ದೇಶಿಸಿ ಮಾತನಾಡಬೇಕಾದರೂ ಬಹುವಚನದಿಂದಲೇ ಮಾತನಾಡುತ್ತಿದ್ದರು. ಬಹಳ ವಿಶೇಷ ಅಂದರೆ ಅವರು ರಾಜಕೀಯ ವ್ಯಕ್ತಿಗಿಂತ ಹೆಚ್ಚು, ಅವರೊಬ್ಬ ಸಾಂಸ್ಕೃತಿಕ ನಾಯಕ ಎಂದೇ ಹೇಳಬಹುದು. ಅವರ ಕಾರ್ಯವಿಧಾನ ಎಲ್ಲರನ್ನೂ ಕೂಡ ಮೆಚ್ಚಿಸುವಂಥದ್ದು. ಎಲ್ಲರ ಜೊತೆ ಸಮನ್ವಯತೆಯಿಂದ ಇದ್ದರು ಎಂದು ತಿಳಿಸಿದರು.
ರಾಜ್ಕುಮಾರ್ ಅಪಹರಣ ಅತೀ ಸೂಕ್ಷ್ಮ ವಿಚಾರವಾಗಿತ್ತು. ಅದನ್ನು ಅವರು ಬಹಳ ನಾಜೂಕಾಗಿ ನಿಭಾಯಿಸಿದ್ದರು. ಸಮಾಧಾನ ಚಿತ್ತದಿಂದ ನಿರ್ವಹಿಸಿದ್ದರು. ಸ್ವಲ್ಪ ಹೆಚ್ಚೂ ಕಡಿಮೆ ಆಗಿದ್ದರೂ ರಾಜ್ಯವೇ ಹೊತ್ತಿ ಉರಿಯುತ್ತಿತ್ತು. ಎಲ್ಲೂ ಅವಸರ ತೋರಿಸುತ್ತಿರಲಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದರು. ಕಾಡುಗಳ್ಳ ವೀರಪ್ಪನ್ನನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ಕಾಡಿನ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಕುಮಾರ್ ಅವರನ್ನು ಬಿಡುಗಡೆಗೊಳಿಸಿದ ರೀತಿ ಇದೆಯಲ್ಲಾ ಅದು ಎಲ್ಲರೂ ಮೆಚ್ಚುವಂಥದ್ದು ಎಂದರು.
ಅವರ ಆಡಳಿತಾವಧಿಯಲ್ಲಿ ತೀವ್ರ ಬರಗಾಲ ಎದುರಾಗಿತ್ತು. ಮೂರು ವರ್ಷ ಸತತ ಬರಗಾಲ ಇತ್ತು. ರಾಜ್ಯದ ಜನರಿಗೆ ತುತ್ತು ಅನ್ನ, ಜಾನುವಾರುಗಳ ಮೇವಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದರು. ಮೂರು ವರ್ಷದ ಬರಗಾಲವನ್ನು ಅತ್ಯಂತ ಸಮರ್ಥವಾಗಿ ಎದುರಿಸಿದರು. ನಾಡಿನ ಜನರಿಗೆ ಬರಗಾಲದ ಬಿಸಿ ತಟ್ಟದ ಹಾಗೆ ನೋಡಿಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಧಾನಸಭೆ, ಪರಿಷತ್ನಲ್ಲಿ ಎಸ್.ಎಂ.ಕೃಷ್ಣಗೆ ಭಾವಪೂರ್ಣ ಶ್ರದ್ಧಾಂಜಲಿ