ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ ಎಂದು ಆಷಾಢ ಮಾಸದಲ್ಲಿ ಪರ್ವ ಎಂದು ಆಚರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದೇ ರೀತಿ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಂಸನೂರು ಎಂಬ ಗ್ರಾಮದಲ್ಲಿ ಶನಿವಾರ ಸಾಮೂಹಿಕವಾಗಿ ಗುಗ್ಗರಿ ಪರ್ವಾಚರಣೆ ನಡೆಯಿತು.
ಹಂಸನೂರ ಗ್ರಾಮದ ಹೂರ ವಲಯದಲ್ಲಿರುವ ಕೊಪ್ಪದಾಳೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಗ್ರಾಮದ ಜನರು ಸೇರಿ ಗುಗ್ಗರಿ ಪರ್ವ ಆಚರಿಸುತ್ತಾರೆ. ಗ್ರಾಮದ ಮಾರುತೇಶ್ವರ ದೇವಾಲಯದಿಂದ ಟ್ರ್ಯಾಕ್ಟರ್ನಲ್ಲಿ ಸಜ್ಜೆ ಹಾಗೂ ಜೋಳದ ರೊಟ್ಟಿಯ ಬುತ್ತಿ ಗಂಟುಗಳನ್ನಿಟ್ಟು ವಾದ್ಯಗಳೊಂದಿಗೆ ಹೊರ ವಲಯದಲ್ಲಿರುವ ದೇವಸ್ಥಾನಕ್ಕೆ ಬರುತ್ತಾರೆ. ಹೀಗೆ ಬಂದವರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ. ಬನ್ನಿ ಮರಕ್ಕೂ ವಿಶೇಷ ಪೂಜೆ ನಡೆಯುತ್ತದೆ. ಆ ಬಳಿಕ ದೇವರ ದರ್ಶನ ಪಡೆದು ಹೊಲಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಗುಗ್ಗರಿ ಪಲ್ಲೆಯ ಜೊತೆಗೆ ಖಡಕ್ ರೊಟ್ಟಿ ಸವಿಯುತ್ತಾರೆ. ಆಷಾಢ ಮಾಸದ ಮೂರನೇ ಶನಿವಾರ ಗುಗ್ಗರಿ ಪರ್ವ ಎಂದು ಆಚರಿಸಲಾಗುತ್ತದೆ.
ಈ ಆಚರಣೆಯಿಂದ ಜಮೀನುಗಳಿಗೆ ದೇವರು ಕಾವಲಾಗಿರುತ್ತಾನೆ. ಮಳೆ, ಬೆಳೆ ಚೆನ್ನಾಗಿ ಆಗುವಂತೆ ಆಶೀರ್ವದಿಸುತ್ತಾನೆ ಎಂಬುದು ಜನರ ನಂಬಿಕೆ. ಗುಗ್ಗರಿ ಪರ್ವದ ಅಂಗವಾಗಿ ಗ್ರಾಮಸ್ಥರು ಕಡಲೆ, ಹೆಸರು, ಜೋಳ, ಸಜ್ಜೆ, ಶೇಂಗಾ, ತೊಗರಿಬೇಳೆ ಹೀಗೆ ಸುಮಾರು 12 ಬಗೆಯ ಕಾಳುಗಳ ಪಲ್ಲೆ ಮಾಡುತ್ತಾರೆ. ಆಚರಣೆ ಹಿಂದಿನ ದಿನ ಗ್ರಾಮದ ಎಲ್ಲಾ ಮನೆಯಿಂದಲೂ ರೊಟ್ಟಿ ಮಾಡಿ ತರುವಂತೆ ತಿಳಿಸಲಾಗುತ್ತದೆ. ನಂತರ ಸಾವಿರಾರು ರೊಟ್ಟಿ ಸಂಗ್ರಹಿಸಿಕೊಂಡು ಒಂದೆಡೆ ಸೇರಿ ಪರ್ವ ಆಚರಿಸುವುದು ವಿಶೇಷ.
ಇದನ್ನೂ ಓದಿ: ಚಾಮರಾಜೇಶ್ವರ ರಥೋತ್ಸವ ಸಂಪನ್ನ: ಇಲ್ಲಿ ನವಜೋಡಿಗಳದ್ದೇ ಕಲರವ - Sri Chamarajeshwar Rathothsava