ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಪಿಎಸ್ಐ, ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ. ಸುಮಾರು 30ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.
ಹಲ್ಲರೆ ಗ್ರಾಮದಿಂದ ಹುರ ಗ್ರಾಮದ ಕಡೆಗೆ ತೆರಳುವ ರಸ್ತೆಗೆ ಹೆಸರಿಡುವ ಸಲುವಾಗಿ ಒಂದು ಗುಂಪಿನ ಕೆಲವು ಯುವಕರು ಸ್ಥಳೀಯ ಪಂಚಾಯತಿಗೆ ಅರ್ಜಿ ಸಲ್ಲಿಸಿ, ಪಿಡಿಒ ಅವರಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ ನಾಮಫಲಕ ಅಳವಡಿಸುವುದಕ್ಕೆ ಕಳೆದ ಐದು ದಿನಗಳ ಹಿಂದೆ ಮತ್ತೊಂದು ಗುಂಪಿನ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ನಾಮಫಲಕ ಅಳವಡಿಕೆ ಮುಂದೂಡಲಾಗಿತ್ತು.
ಸೋಮವಾರ ರಾತ್ರಿ ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿ, ಜಗಳ ತಾರಕಕ್ಕೇರಿದೆ. ಬಳಿಕ ಗ್ರಾಮದಲ್ಲಿ ಕಲ್ಲು ತೂರಾಟ ನಡೆಯಿತು. ಆಕ್ರೋಶಿತರು ವಾಹನಗಳನ್ನು ಜಖಂಗೊಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಎಎಸ್ಪಿ ನಂದಿನಿ, ಡಿವೈಎಸ್ಪಿ ಗೋವಿಂದರಾಜು, ವೃತ್ತನಿರೀಕ್ಷಕ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಸದ್ಯ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹನುಮ ಧ್ವಜ ತೆರವು ವಿವಾದ: ಕೆರಗೋಡು ಗ್ರಾಮದಿಂದ ಬಿಜೆಪಿ ಬೃಹತ್ ಪಾದಯಾತ್ರೆ