ದಾವಣಗೆರೆ: ಎರಡನೇ ಹಂತದ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಈ ಬಾರಿಯೂ ಎರಡು ಪ್ರತಿಷ್ಠಿತ ಕುಟುಂಬಗಳ ನಡುವೆ ಚುನಾವಣೆ ನಡೆಯುತ್ತಿರುವುದರಿಂದ ಸಾಕಷ್ಟು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ಅಭ್ಯರ್ಥಿಯಾಗಿ ಗಾಯಿತ್ರಿ ಸಿದ್ದೇಶ್ವರ್ ಕಣದಲ್ಲಿದ್ದು ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಕಮಲ ಅರಳಿಸಲು ಗಾಯಿತ್ರಿ ಸಿದ್ದೇಶ್ವರ್ ತೀವ್ರ ಕಸರತ್ತು ನಡೆಸುತ್ತಿದ್ದರೆ, ಬಿಜೆಪಿ ಮಣಿಸಲು ಪ್ರಭಾ ಮಲ್ಲಿಕಾರ್ಜುನ್ ಕೂಡ ಕ್ಷೇತ್ರದಾಧ್ಯಂತ ಓಡಾಡುತ್ತಿದ್ದಾರೆ. ಬಿಜೆಪಿ ಮೋದಿ ಗ್ಯಾರಂಟಿ ನೆಚ್ಚಿಕೊಂಡಿದ್ದರೆ, ಕಾಂಗ್ರೆಸ್ ಐದು ಗ್ಯಾರಂಟಿ ನಂಬಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯ ತಂತ್ರ, ಪ್ರತಿತಂತ್ರಕ್ಕೆ ಮುಂದಾಗಿದ್ದಾರೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಜೆಪಿ, ಈ ಚುನಾವಣೆಯಲ್ಲೂ ಮೋದಿ ಬಲದಿಂದ ಗೆಲುವಿನ ಕೇಕೆ ಹಾಕುವ ವಿಶ್ವಾಸದಲ್ಲಿದೆ. ಇನ್ನು ಕಾಂಗ್ರೆಸ್ ಈ ಬಾರಿ ಹೇಗಾದ್ರೂ ಮಾಡಿ ಬಿಜೆಪಿ ಕೈಯಿಂದ ಕ್ಷೇತ್ರವನ್ನು ವಶಕ್ಕೆ ಪಡೆದೇ ತೀರುತ್ತೇವೆ ಎನ್ನುವ ಧಾವಂತದಲ್ಲಿದ್ದು, ಐದು ಗ್ಯಾರಂಟಿಗಳು ಕೈ ಹಿಡಿಯುವ ನಂಬಿಕೆಯಲ್ಲಿದ್ದಾರೆ.
ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಬ್ಬರು ಸಂಬಂಧದಲ್ಲಿ ತಾಯಿ-ಮಗಳು ಆಗಿದ್ದು, ತಾಯಿ-ಮಗಳ ನಡುವೆ ಈ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಜಿ.ಬಿ. ವಿನಯ್ ಕುಮಾರ್ ಕೂಡ ಇವರಿಬ್ಬರಿಗೂ ಪೈಪೋಟಿ ನೀಡುತ್ತಿದ್ದಾರೆ. ಮತದಾನಕ್ಕೆ ಕೆಲವು ದಿನ ಮಾತ್ರ ಉಳಿದಿದ್ದು ಮತಬೇಟೆ ಜೋರಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ ಆದಿಯಾಗಿ ಹಲವು ನಾಯಕರು ಕಣಕ್ಕಿಳಿದರೆ, ಬಿಜೆಪಿ ಅಭ್ಯರ್ಥಿ ಪರ ಶೋಭಾ ಕರಂದ್ಲಾಜೆ, ಯದುವೀರ್ ಒಡೆಯರ್, ಎಸ್. ಎ. ರವೀಂದ್ರನಾಥ್ ಆದಿಯಾಗಿ ಪ್ರಚಾರಕ್ಕಿಳಿದಿದ್ದಾರೆ. ಪ್ರಚಾರದ ವೇಳೆ ಉಭಯ ನಾಯಕರುಗಳ ಹೇಳಿಕೆಗಳು ಸಾಮಾನ್ಯವಾಗಿವೆ.
ಮೋದಿಯವರು ಬಂದು ಹೋದರೂ ಯಾವುದೇ ಪರಿಣಾಮ ಆಗಿಲ್ಲ. ಎಲ್ಲ ಕ್ಷೇತ್ರದಲ್ಲಿ ಒಳ್ಳೆ ವಾತಾವರಣ ಇದೆ. ಲೋಕಸಭಾ ಕ್ಷೇತ್ರದಲ್ಲಿ ಏಳು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. 4 ಬಾರಿ ಗೆದ್ದಿರುವ ಸಂಸದರು ಅಭಿವೃದ್ಧಿ ಮಾಡಿಲ್ಲ ಎಂದು ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಹಾಗಾಗಿ ಈ ಬಾರಿ ಬದಲಾವಣೆ ಬಯಸಿದ್ದಾರೆ. ಡಾ. ಪ್ರಭಾ ಮಲ್ಲಿಕಾರ್ಜುನ್ - ಕಾಂಗ್ರೆಸ್ ಅಭ್ಯರ್ಥಿ
ಮೋದಿಯವರು ಬಂದು ಹೋದ ಬಳಿಕ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂರಕ್ಕೆ ನೂರು ನನ್ನ ಗೆಲುವು ಖಚಿತ. ಕ್ಷೇತ್ರದ ಜನರು ಈಗಾಗಲೇ ನನಗೆ ಎಂಪಿ ಎಂದು ಕರೆಯುತ್ತಿದ್ದಾರೆ. ಮತದಾರರು ಕೂಡ ಬಟನ್ ಒತ್ತಲು ಸಿದ್ಧರಿದ್ದಾರೆ. ಗಾಯಿತ್ರಿ ಸಿದ್ದೇಶ್ವರ್ - ಬಿಜೆಪಿ ಅಭ್ಯರ್ಥಿ
ಮತದಾರರ ಮಾಹಿತಿ: 17,09,244 ಒಟ್ಟು ಮತಗಳಿದ್ದು, ಅದರಲ್ಲಿ 8,51,990 ಪುರುಷರು, 8,57,117 ಮಹಿಳೆಯರು ಮತ್ತು 137 ಇತರೆ ಮತದಾರರಿದ್ದಾರೆ. 565 ಒಟ್ಟು ಸೇವಾ ಮತದಾರರಿದ್ದು, ಈ ಪೈಕಿ 553 ಪುರುಷ ಮತ್ತು 12 ಮಹಿಳಾ ಮತದಾರರಿದ್ದಾರೆ. 44,039 ಒಟ್ಟು ಯುವ ಮತದಾರು ಇದ್ದು, ಇದರಲ್ಲಿ 23,405 ಪುರುಷ, 20,630 ಮಹಿಳಾ ಮತ್ತು 04 ಇತರೆ ಮತದಾರರಿದ್ದಾರೆ.
ಜಿಲ್ಲೆಯಲ್ಲಿ 85 ವರ್ಷ ಮೇಲ್ಪಟ್ಟ 12,854 ಮತದಾರರು ಇದ್ದು, ಈ ಪೈಕಿ 5,451 ಪುರುಷ ಮತ್ತು 7,403 ಮಹಿಳಾ ಮತದಾರರು ಇದ್ದಾರೆ. 23,364 ಒಟ್ಟು ದಿವ್ಯಾಂಗ ಮತದಾರರಲ್ಲಿ 13,378 ಪುರುಷ, 9,985 ಮಹಿಳಾ ಮತ್ತು ಒಬ್ಬರು ಇತರೆ ಮತದಾರರು ಇದ್ದಾರೆ. 1,946 ಒಟ್ಟು ಮತಗಟ್ಟೆಗಳಿದ್ದು, ಅದರಲ್ಲಿ 539 ನಗರ ಮತ್ತು 1,407 ಗ್ರಾಮಾಂತರ ಮತಗಟ್ಟೆಗಳಿವೆ.