ರಾಮನಗರ: ಚನ್ನಪಟ್ಟಣದ ಬಡಾಮಕಾನ್ ಹಜರತ್ ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಅವರ 285ನೇ ಗಂಧ ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ಗಂಧ ಮಹೋತ್ಸವದ ಮೊದಲ ದಿನವಾದ ಶುಕ್ರವಾರ ದಾರ್ಗದಲ್ಲಿ ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಆ ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಗೆ ಗಂಧ ಮಹೋತ್ಸವ ಸಂಚಾರ ನಡೆಸಲಾಯಿತು.
ಖಾದ್ರಿ 300 ವರ್ಷಗಳ ಹಿಂದೆ ಕೆಲವು ತಿಂಗಳುಗಳ ಕಾಲ ನಮ್ಮ ಕ್ಷೇತ್ರದಲ್ಲಿ ವಾಸವಾಗಿದ್ದರ ಬಗ್ಗೆ, ವಿಜಯಪುರ ಮಾರ್ಗವಾಗಿ ಕರ್ನಾಟಕಕ್ಕೆ ಬಂದು ರಾಮನಗರ ತಾಲೂಕು, ಜಾಲಮಂಗಲ ಬೆಟ್ಟದಲ್ಲಿ ಸುಮಾರು 7 ವರ್ಷಗಳ ಕಾಲ ನೆಲೆಸಿದ್ದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಹಿಂದಿನ ದರ್ಗಾದ ಗುರುಗಳು ಮರಣದ ನಂತರ ಹಳೆಯ ಮಂಟಪ ಕೆಡವಿ ಟಿಪ್ಪು ಸುಲ್ತಾನ್ ಈ ನೂತನ ದರ್ಗಾ ನಿರ್ಮಿಸಿದ್ದಾರೆ. 284 ವರ್ಷಗಳಿಂದಲೂ ಪ್ರತಿ ವರ್ಷ ಗಂಧ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ವಿಶೇಷ ಎನ್ನುತ್ತಾರೆ ಸ್ಥಳೀಯರು.
ಸೈಯದ್ ಮಹಮ್ಮದ್ ಅಖಿಲ್ ಷಾ ಖಾದ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದರ್ಶನ ಮಾಡಿ, ಇಷ್ಟಾರ್ಥ ನೆರವೇರಿಸುವಂತೆ ರಾತ್ರಿಯಿಡೀ ಮೆರವಣಿಗೆ ನಡೆಯುತ್ತದೆ. ಹಾಗೆಯೇ ಭಕ್ತರು ಏನೇ ಪ್ರಾರ್ಥಿಸುವುದರಿಂದ ಈಡೇರುತ್ತದೆಂಬ ನಂಬಿಕೆ ಇದೆ. ಈ ಬಡಾಮಕಾನ್ ದರ್ಗಾದಲ್ಲಿ ನಡೆಯುವ ಗಂಧ ಮಹೋತ್ಸವಕ್ಕೆ ಆಂಧ್ರಪ್ರದೇಶ, ತಮಿಳುನಾಡು, ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ಭಕ್ತರು ಆಗಮಿಸಿ, ಖವ್ವಾಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ದೇಶದ ವಿವಿಧ ಭಾಗಗಳಿಂದ ಹೆಸರಾಂತ ಖವ್ವಾಲಿ ತಂಡಗಳು ಪಾಲ್ಗೊಂಡಿವೆ.
ಗಂಧ ಮಹೋತ್ಸವದ ನಿಮಿತ್ತ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಗಮನ ಸೆಳೆಯುತ್ತಿದೆ. ಬೆಂಗಳೂರು - ಮೈಸೂರು ರಸ್ತೆ, ಎಂ.ಜಿ.ರಸ್ತೆ, ದರ್ಗಾ ಸುತ್ತಮುತ್ತಲಿನಲ್ಲಿ ಅಳವಡಿಸಿರುವ ದೀಪಾಲಂಕಾರದಿಂದ ನಗರವು ಝಗಮಗಿಸುತ್ತಿದೆ. ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಸುಮುದಾಯದವರು ಪಾಲ್ಗೊಳ್ಳುವುದು ಮಹೋತ್ಸವದ ಮತ್ತೊಂದು ವಿಶೇಷ. ಹಿಂದೂ - ಮುಸ್ಲಿಂ ಸಾಮರಸ್ಯಕ್ಕೆ ಇದೊಂದು ಸಾಕ್ಷಿ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ಈಡೇರಿಸುವ ಶ್ರೀರಾಮನ ಬಂಟ; ವಾಸ್ತು ಪ್ರಕಾರ ಆಂಜನೇಯನ ಫೋಟೋ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ?