ವಿಜಯಪುರ : ಗಣರಾಜ್ಯೋತ್ಸವದ ಧ್ವಜಾರೋಹಣ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣವೊಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಗ್ರಾಮದ ಮಲ್ಲಿಕಾರ್ಜುನ ಗಿನ್ನಿ ಎನ್ನುವವರು ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಧ್ವಜಾರೋಹಣ ಮಾಡುವಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಮಲ್ಲಿಕಾರ್ಜುನ ಗಿನ್ನಿ ಕರವೇ ಮುಖಂಡರಾಗಿದ್ದಾರೆ. ಅವರಿಂದು ಧ್ವಜಾರೋಹಣದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮತ್ತೊಮ್ಮೆ ಗುಂಡು ಹಾರಿಸುವಾಗ ಮಿಸ್ಫೈರ್ ಆಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೊಣಕಾಲಿಗೆ ಗುಂಡು ತಗುಲಿದೆ. ಅದೃಷ್ಟವಶಾತ್ ಸೋಮವ್ವ ಹೊಸಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅವರನ್ನು ಚಿಕಿತ್ಸೆಗಾಗಿ ಜಯಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಗುಂಡು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಅವರು ಸದ್ಯ ಆರೋಗ್ಯವಾಗಿದ್ದಾರೆ. ಈ ಬಗ್ಗೆ ಮಾಧ್ಯಮದರೊಂದಿಗೆ ಪ್ರತಿಕ್ರಿಯಿಸಿದ ಅವರು, ಇಂದು ಬೆಳಗ್ಗೆ ಧ್ವಜಾರೋಹಣ ಮಾಡುವಾಗ ಘಟನೆ ನಡೆದಿದೆ. ಆಕಸ್ಮಿಕವಾಗಿ ಕಾಲಿಗೆ ಗುಂಡು ತಗುಲಿದೆ. ಆದರೆ, ಇದು ಯಾವುದೇ ರೀತಿಯ ದ್ವೇಷದಿಂದ ಆಗಿಲ್ಲ. ಪ್ರತಿ ಬಾರಿ ಧ್ವಜಾರೋಹಣ ವೇಳೆ ಗುಂಡು ಹಾರಿಸುತ್ತಾರೆ. ಗುಂಡು ಹಾರಿಸಿದ ವ್ಯಕ್ತಿಯೂ ನನ್ನ ಮಗನಿದ್ದಂತೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಅವರ ಪುತ್ರ ಶಿವಾನಂದ ಹೊಸಮನಿ ಅವರು ಪ್ರತಿಕ್ರಿಯಿಸಿ, ಮುಂಜಾನೆ ಧ್ವಜಾರೋಹಣ ಮಾಡಿದ್ದಾರೆ. ಆಗ ಮಲ್ಲಿಕಾರ್ಜುನ ಗಿನ್ನಿ ಅವರು ಗಾಳಿಯಲ್ಲಿ ಒಮ್ಮೆ ಗುಂಡು ಹಾರಿಸಿದ್ದಾರೆ. ಇನ್ನೊಮ್ಮೆ ಗುಂಡು ಹಾರಿಸಿದಾಗ ಅಕಸ್ಮಾತಾಗಿ ಮಿಸ್ ಫೈರ್ ಆಗಿದೆ. ಗನ್ ಅನ್ನು ಕೆಳಗೆ ಇಳಿಸುವಾಗ ನಮ್ಮ ತಾಯಿಗೆ ಗುಂಡು ತಗುಲಿದೆ. ಪ್ರತಿಬಾರಿಯೂ ಪಂಚಾಯಿತಿಯಲ್ಲಿ ಧ್ವಜಾರೋಹಣ ಮಾಡುವಾಗ ಗುಂಡುಹಾರಿಸುತ್ತಾರೆ. ಗಂಡು ಮೊಳಕಾಲಿನ ಕೆಳಗೆ ಬಡಿದಿತ್ತು. ವೈದ್ಯರು ಅದನ್ನು ತೆಗೆದಿದ್ದಾರೆ. ಈಗ ನಮ್ಮ ತಾಯಿ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ರಿವಾಲ್ವಾರ್ ಸ್ವಚ್ಛ ಮಾಡುವಾಗ ಮಿಸ್ ಫೈಯರ್: ಹಣೆಗೆ ತಗುಲಿದ ಗುಂಡು