ಮಂಗಳೂರು: ಸರ್ಕಾರಿ ನೌಕರರು ಆರ್‌ಎಸ್ಎಸ್‌ಗೆ ಸೇರಬಹುದು ಎನ್ನವ ಮೋದಿ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆದರಿಕೆಯೊಡ್ಡಿದಂತೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, "ಭಾರತ ದೇಶವನ್ನು ಧರ್ಮನಿರಪೇಕ್ಷತೆಯ ತತ್ವದ ಮೇಲೆ ಕಟ್ಟಬೇಕೆನ್ನುವುದು ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಇದೇ ರೀತಿ ಬೇರೆ ಸಂಘಟನೆಗಳು ನಮಗೂ ಅವಕಾಶ ನೀಡಿ ಎಂದರೆ ಬಿಜೆಪಿ ಸರ್ಕಾರ ಕೊಡುತ್ತದೆಯೇ?" ಎಂದು ಪ್ರಶ್ನಿಸಿದರು.
"ಪ್ರಜಾಪ್ರಭುತ್ವ ಉಳಿಯದಿದ್ದರೆ, ಎಲ್ಲ ವರ್ಗದ ಮಂದಿ ಗಾಂಧಿಯವರ ರಾಮರಾಜ್ಯ ಕಾಣಲು ಸಾಧ್ಯವಿಲ್ಲ. ಸಂವಿಧಾನವನ್ನು, ಪ್ರಜಾತಂತ್ರವನ್ನು ಉಳಿಸಲು ಮೋದಿ ಅವರನ್ನು ಸೋಲಿಸಬೇಕಿತ್ತು. ಆದ್ದರಿಂದ ಆ ಗೆಲುವು ವ್ಯವಸ್ಥೆಗೆ ಆಗಿರಬಹುದಾದ ಸೋಲಾಗಿದೆ. ಬಜೆಟ್ನಲ್ಲಿ ಮೋದಿಯವರು ಸ್ಟೇಟ್ಸ್‌ಮ್ಯಾನ್‌ಶಿಪ್ ತೋರಬೇಕಿತ್ತು. ಆದರೆ, ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ಮಾತ್ರ ಅನುದಾನ ಕೊಡುವುದು ತಾರತಮ್ಯವಲ್ಲವೇ? ನೀತಿ ಆಯೋಗದ ಸಭೆಯಲ್ಲಿ ಎಲ್ಲ ರಾಜ್ಯಗಳ ಸಿಎಂಗಳನ್ನು ಕಾನ್ಫಿಡೆನ್ಸ್‌ಗೆ ತೆಗೆದುಕೊಳ್ಳಬೇಕಿತ್ತು. ಅದರ ಬದಲು ಚಂದ್ರಬಾಬು ನಾಯ್ಡು ಅವರಿಗೆ 20 ನಿಮಿಷ ಕೊಟ್ಟರೆ, ಮಮತಾ ಬ್ಯಾನರ್ಜಿಯವರು ಮಾತನಾಡುವಾಗ ಮೈಕ್ ಅನ್ನೇ ಆಫ್ ಮಾಡುತ್ತಾರೆ. ಇದು ಸಂವಿಧಾನಕ್ಕೆ ಮಾರಕ" ಎಂದು ಹೇಳಿದರು.