ಬೆಂಗಳೂರು: ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಅನುಮತಿ ಕೊಡಲು ನಿರ್ಧರಿಸಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಶಾಂತಿಯುತ ಪಾದಯಾತ್ರೆ ನಡೆಸ್ತೇವೆ ಎಂದಿದ್ದಾರೆ. ಹೀಗಾಗಿ ಅನುಮತಿ ಕೊಡಲು ನಾವು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿಎಂಗೆ ರಾಜ್ಯಪಾಲರ ಶೋಕಾಸ್ ನೊಟೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಸಂಪುಟ ನಿರ್ಣಯ ಕಳಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ರಾಜ್ಯಪಾಲರು ಇಲ್ಲ. ಅವರ ಕಚೇರಿಗೆ ನಿನ್ನೆಯೇ ತಲುಪಿಸಿರಬೇಕು. ಆತುರವಾಗಿ ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. ರಾಜ್ಯಪಾಲರ ಮೇಲೆ ಬೇರೆ ಒತ್ತಡ ಇರಬಹುದು. ಆ ರೀತಿಯ ಅನುಮಾನಗಳು ನಮಗೆ ಬಂದಿವೆ. ರಾಜ್ಯಪಾಲರು ಏನೇ ನಿರ್ಧಾರ ಕೈಗೊಳ್ಳಲಿ. ಎದುರಿಸೋಕೆ ನಾವು ಸಿದ್ಧರಿದ್ದೇವೆ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನಾವು ನ್ಯಾಯ್ಯಾಂಗದ ಬಾಗಿಲು ತಟ್ಟಬೇಕಾಗುತ್ತದೆ. ರಾಜ್ಯಪಾಲರಿಗೆ ನೊಟೀಸ್, ತನಿಖೆಗೆ ಅಧಿಕಾರವಿದೆ. ಆದರೆ, ಅವರು ದಾಖಲೆ ಸಮೇತ ಸಮರ್ಥಿಸಬೇಕು ಎಂದರು.
ಸರ್ಕಾರ - ರಾಜ್ಯಪಾಲರ ಸಂಘರ್ಷ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅನೇಕ ಸಂದರ್ಭದಲ್ಲಿ ಇಂಥ ಪ್ರಸಂಗ ಬರುತ್ತವೆ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡ್ತೇವೆ. ನಿಮ್ಮಿಂದ ತಪ್ಪಾಗಿದೆ ಅಂತ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡ್ತೇವೆ. ಅವರು ಸಂವಿಧಾನ ಬದ್ಧ ಅಧಿಕಾರ ಸರಿಯಾಗಿ ಬಳಸಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗುವುದು ಅನಿವಾರ್ಯ. ಯಾವ ಆಧಾರದಲ್ಲಿ ಪ್ರಾಸಿಕ್ಯೂಷನ್ ಕೊಡ್ತಾರೆ ಅನ್ನೋದು ಬೇಕಲ್ಲ?. ನಾವು ಸ್ಪಷ್ಟೀಕರಣ ಕೊಟ್ಟ ಬಳಿಕವೂ ಅನುಮತಿಸಿದರೆ, ಅದನ್ನು ಅವರು ಸಮರ್ಥಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಒಳ ಮೀಸಲಾತಿಗೆ ಸುಪ್ರೀಂ ಅನುಮತಿ ವಿಚಾರವಾಗಿ ಮಾತನಾಡಿ, ಸುಪ್ರೀಂ ಒಳ ಮೀಸಲಾತಿ ಗೊಂದಲ ಬಗೆಹರಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸ್ತೇವೆ. ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಚರ್ಚಿಸುತ್ತೇವೆ. ಒಳ ಮೀಸಲಾತಿ ನೀಡಲು ಪ್ರಯತ್ನಿಸ್ತೇವೆ ಎಂದು ಭರವಸೆ ನೀಡಿದರು.
ರೇವಣ್ಣ, ಭವಾನಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖಾಧಿಕಾರಿಗಳು ಎಲ್ಲ ಗಮನಿಸಿ ಚಾರ್ಜ್‌ಶೀಟ್ ಹಾಕಿದ್ದಾರೆ. ಸಾಕ್ಷ್ಯಗಳ ಆಧಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿದೆ. ನೋಡೋಣ ಯಾವ ತೀರ್ಪು ಬರುತ್ತೆ ಅಂತ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
7 ದಿನ 140 ಕಿಮೀ ಪಾದಯಾತ್ರೆ: ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಖಂಡಿಸಿ ನಾಳೆ ಬೆಂಗಳೂರಿನಿಂದ ಆರಂಭವಾಗಲಿರುವ ಪಾದಯಾತ್ರೆ ಆ.10ರಂದು ಮೈಸೂರಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿನಿತ್ಯ 20 ಕಿಮೀ ನಂತೆ 7 ದಿನಗಳ ಕಾಲ 140 ಕಿಮೀ ಪಾದಯಾತ್ರೆ ಮಾಡುತ್ತೇವೆ. ಪ್ರತಿ ದಿನ 8 ರಿಂದ 10 ಸಾವಿರ ಜನರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಉದ್ಘಾಟನೆ, ಸಮಾರೋಪ ಸೇರಿಸಿಕೊಂಡು 7 ದೊಡ್ಡ ಪ್ರತಿಭಟನಾ ಸಭೆಗಳು ನಡೆಯಲಿವೆ. ಪಾದಯಾತ್ರೆಯ ಯಶಸ್ಸಿಗೆ 20ರಿಂದ 22 ವಿಭಾಗಗಳನ್ನು ರಚಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಗೆ ಕೌಂಟರ್; ಕಾಂಗ್ರೆಸ್ನಿಂದ ನೈತಿಕತೆ ಪ್ರಶ್ನೆಯ ಸಭೆ - Congress Counter to BJP