ಬೆಂಗಳೂರು: ಮುಡಾ ಅಕ್ರಮ ಸಂಬಂಧ ರಾಜ್ಯಪಾಲರು ಸಿಎಂಗೆ ಶೋಕಾಸ್ ನೊಟೀಸ್ ಕಳುಹಿಸಿರುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಗೆ ಸಿಎಂ ಗೈರಾಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು.
ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಪರಮೇಶ್ವರ್, ಸಚಿವ ಸಂಪುಟ ಸಭೆಯಲ್ಲಿ ಈ ಶೋಕಾಸ್ ನೊಟೀಸ್ ಸಂಬಂಧ ಮುಂದಿನ ಕಾನೂನು ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಆ ಮೂಲಕ ಸಂಪುಟ ಸಭೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿಯಲಿದ್ದಾರೆ. ರಾಜಭವನದ ನೊಟೀಸ್ ವಿರುದ್ಧ ಸಂಪುಟ ಸಭೆ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ತಾವಿರುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಸಿಎಂ ಉಪಾಹಾರ ಕೂಟ ಆಯೋಜಿಸಿದ್ದು, ಅಲ್ಲಿ ಸಚಿವರಿಗೆ ಹೇಳಬೇಕಾದ್ದನ್ನೆಲ್ಲ ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗುತ್ತದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಇಂದಿನ ಸಚಿವ ಸಂಪುಟ ಸಭೆಗೆ ಗೈರಾಗಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಪುಟ ಸಭೆ ನೇತೃತ್ವ ವಹಿಸಲು ಅಧಿಕಾರ ನೀಡಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಸಿಎಂಗೆ ಶೋಕಾಸ್ ನೊಟೀಸ್ ನೀಡಿರುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನೊಟೀಸ್ ಅಂಶಗಳ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಕಾನೂನು ಪ್ರಕ್ರಿಯೆ ಬಗ್ಗೆಯೂ ಚರ್ಚಿಸಿದ್ದೇವೆ ಎಂದರು.
ಮೌಲ್ಯದ ಆಧಾರದ ಮೇಲೆ ಸಂಪುಟಕ್ಕೆ ಬರುತ್ತಿಲ್ಲ: ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ರಾಜ್ಯಪಾಲರು ಶೋಕಾಸ್ ನೊಟೀಸ್ ಕೊಟ್ಟಿದ್ದಾರೆ. ಅದು ತಪ್ಪು ಅಂತ ಅನ್ನಿಸುತ್ತಿದೆ. ಮೌಲ್ಯದ ಆಧಾರದ ಮೇಲೆ ಸಿಎಂ ಸಚಿವ ಸಂಪುಟ ಸಭೆಗೆ ಬರುತ್ತಿಲ್ಲ. ಪ್ರಮುಖ ನಿರ್ಣಯ ಮಾಡೋಕೆ ಹೇಳಿದ್ದಾರೆ. ಸಭೆಯಲ್ಲಿ ನೊಟೀಸ್ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ ನಿವಾಸದಲ್ಲಿ ಸಿಎಂ ಬ್ರೇಕ್ ಫಾಸ್ಟ್ ಸಭೆ: ರಾಜ್ಯಪಾಲರ ನೋಟಿಸ್ ಬಗ್ಗೆ ಸಂಪುಟ ಸಚಿವರ ಜೊತೆ ಸಮಾಲೋಚನೆ