ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟು ಅವಧಿ ಮುಂಜಾನೆ 1 ಗಂಟೆಯವರೆಗೆ ವಿಸ್ತರಿಸಿ ಸರ್ಕಾರ ಆದೇಶ - Bengaluru Night Life - BENGALURU NIGHT LIFE
ಮಧ್ಯರಾತ್ರಿ 1 ಗಂಟೆವರೆಗೂ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಲಾಗಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಅಧಿಕೃತ ಆದೇಶ ಹೊರಬಿದ್ದಿದೆ.
Published : Aug 6, 2024, 11:02 PM IST
ಬೆಂಗಳೂರು: ಬೆಂಗಳೂರಿನ ನೈಟ್ ಲೈಫ್ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಾತ್ರಿಯ ವ್ಯಾಪಾರ ವಹಿವಾಟು ಅವಧಿಯನ್ನು ಬೆಳಗಿನ ಜಾವ 1 ಗಂಟೆವರೆಗೆ ವಿಸ್ತರಿಸಿ ಆದೇಶಿಸಿದೆ.
2024-25ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ರಾತ್ರಿಯ ವೇಳೆ ವ್ಯಾಪಾರ-ವಹಿವಾಟಿನ ನಿರ್ಬಂಧವನ್ನು ಬೆಳಗಿನ ಜಾವ 1 ಗಂಟೆಯವರೆಗೆ ವಿಸ್ತರಿಸುವುದಾಗಿ ಘೋಷಿಸಲಾಗಿತ್ತು. ಅದರ ಭಾಗವಾಗಿ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಬಂಧ ಸಡಿಸಿಲಿಸಿ ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ) ಆದೇಶ ಹೊರಡಿಸಿದೆ.
ಹೊಸ ಆದೇಶದಂತೆ ಇನ್ಮುಂದೆ ರಾತ್ರಿ ಒಂದು ಗಂಟೆವರೆಗೂ ಬಾರ್ & ರೆಸ್ಟೋರೆಂಟ್, ಹೋಟೆಲ್ಗಳು, ಎಲ್ಲಾ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಲಿವೆ. ಆ ಮೂಲಕ ನೈಟ್ ಲೈಪ್ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ. ದಿನ ಪೂರ್ತಿ ಅವಕಾಶ ನೀಡುವಂತೆ ಹೋಟೆಲ್ ಅಸೋಸಿಯೇಷನ್ ಮನವಿ ಮಾಡಿತ್ತು.
ಈ ಮುಂಚೆ ಹೋಟೆಲ್ಗಳಿಗೆ ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ಬೆಳಗಿನ ಜಾವ 1 ಗಂಟೆ ವರೆಗೆ ವಹಿವಾಟು ನಡೆಸಲು ಅವಕಾಶ ಇತ್ತು. ಇತ್ತ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಬೆಳಗಿನ ಜಾವ 1 ಗಂಟೆ ವರೆಗೆ ವಹಿವಾಟು ನಡೆಸಲು ಮಾತ್ರ ಅವಕಾಶ ಇತ್ತು. ಪೊಲೀಸ್ ಕಮಿಷನರೇಟ್ ಹೊರಗಿನ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ರಾತ್ರಿ 11.30 ವರೆಗೆ ಮಾತ್ರ ಅವಕಾಶ ಇತ್ತು. ಇದೀಗ ಬಿಬಿಎಂಪಿ ವ್ಯಾಪಪ್ತಿಯಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬೆಳಗ್ಗೆ 6 ಗಂಟೆಯಿಂದ ಮಾರನೇ ದಿನ ಮುಂಜಾನೆ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಸರ್ಕಾರದ ಈ ನಡೆಯನ್ನು ಬೆಂಗಳೂರು ಹೊಟೇಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ವಾಗತಿಸಿದ್ದಾರೆ. ಬಜೆಟ್ ಘೋಷಣೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಬಂಧ ಸಡಿಲಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಉಳಿದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲೂ ನಿರ್ಬಂಧ ಸಡಿಲಿಕೆ ಮಾಡಲಿದೆ. ಇದು ಹೆಚ್ಚು ಉದ್ಯೋಗ ಕಲ್ಪಿಸಲಿದೆ ಹಾಗೂ ಸರ್ಕಾರದ ಆದಾಯವೂ ಹೆಚ್ಚಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಯಾವೆಲ್ಲಾ ಲೈಸನ್ಸ್ ಹೊಂದಿರುವ ಅಂಗಡಿಗಳಿಗೆ ಸಮಯ ವಿಸ್ತರಣೆ:
- CL-4 (ಕ್ಲಬ್ ಲೈಸನ್ಸ್) - 9.00 am to 1.00 am
- CL-6(A) ಸ್ಟಾರ್ ಹೊಟೇಲ್ ಲೈಸನ್ಸ್ - 9.00 am to 1.00 am
- CL-7 (ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಲೈಸನ್ಸ್) - 9.00 am to 1.00 am
- CL-7D (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಯ ಮಾಲೀಕತ್ವದ ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್ ಲೈಸನ್ಸ್) - 9.00 am to 1.00 am
- CL-9 ರಿಫ್ರೆಶ್‌ಮೆಂಟ್ ರೂಂ (Bar) ಲೈಸನ್ಸ್ - 10.00 am to 1.00 am
ಇದನ್ನೂ ಓದಿ: ಮನೆ ಬದಲಿಸುವವರಿಗೆ ಡಿ-ಲಿಂಕ್ ಸೌಲಭ್ಯ: ಗೃಹ ಜ್ಯೋತಿ ಲಾಭ ಪಡೆಯಲು ಅವಕಾಶ - Gruha Jyothi Yojana