ದಾವಣಗೆರೆ: ಮಾಜಿ ಸಿಎಂ ದಿ.ಎಸ್.ನಿಜಲಿಂಗಪ್ಪನವರ ಮನೆಯನ್ನು ಕೊನೆಗೂ ರಾಜ್ಯ ಸರ್ಕಾರ ಖರೀದಿಸಿದೆ. ಚಿತ್ರದುರ್ಗದ 'ವಿನಯ ನಿವಾಸ'ಕ್ಕೆ ಸರ್ಕಾರ 4.18 ಕೋಟಿ ರೂಪಾಯಿ ಪಾವತಿಸಿದೆ.
ವಿ.ಪಿ.ಬಡಾವಣೆಯಲ್ಲಿರುವ ನಿಜಲಿಂಗಪ್ಪನವರ ಹಿರಿಯ ಪುತ್ರ ಎಸ್.ಎನ್.ಕಿರಣ್ ಶಂಕರ್ ಮನೆಯನ್ನು ತಹಶೀಲ್ದಾರ್ ನಾಗವೇಣಿ ಅವರು ರಾಜ್ಯ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ಖರೀದಿಸಿದರು.
ಈ ನಿವಾಸವನ್ನು ಖರೀದಿಸುವ ಪ್ರಯತ್ನಗಳು 18 ವರ್ಷಗಳಿಂದಲೇ ನಡೆಯುತ್ತಿದ್ದವು. ಆದರೆ, ಕಾರಣಾಂತರಗಳಿಂದ ಖರೀದಿ ಸಾಧ್ಯವಾಗಿರಲಿಲ್ಲ. 117 X 130 ಅಡಿ ವಿಸ್ತೀರ್ಣದ ಮನೆ ಖರೀದಿಸಲು ಯಡಿಯೂರಪ್ಪ ಸಿಎಂ ಆಗಿದ್ದಾಗಲೇ 4.24 ಕೋಟಿ ರೂ ನಿಗದಿಪಡಿಸಲಾಗಿತ್ತು. ಮತ್ತು ಸ್ಮಾರಕವಾಗಿ ಅಭಿವೃದ್ಧಿಪಡಿಸಲು 76 ಲಕ್ಷ ಸೇರಿದಂತೆ ಒಟ್ಟು 5 ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದ ಇಲ್ಲಿವರೆಗೆ ಮನೆ ಖರೀದಿಸುವ ಅನುದಾನ ಲೋಕೋಪಯೋಗಿ ಇಲಾಖೆಯ ಖಾತೆಯಲ್ಲಿತ್ತು.

ಮನೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ ಪುತ್ರ: ವಿನಯ ನಿವಾಸವನ್ನು ಸರ್ಕಾರ ಖರೀದಿಸಲು ಹಿಂದೇಟು ಹಾಕಿದ್ದರಿಂದ ಬೇಸರಗೊಂಡಿದ್ದ ಹಿರಿಯ ಪುತ್ರ ಎಸ್.ಎನ್.ಕಿರಣ್‌ಶಂಕರ್ ಸರ್ಕಾರಕ್ಕೆ ಮಾರಾಟ ಮಾಡದಿರಲು ನಿರ್ಧರಿಸಿದ್ದರು. ಹೀಗಾಗಿ, ಹಿಂದೊಮ್ಮೆ ಕಾಂಗ್ರೆಸ್ ನಾಯಕರು ಮನೆ ನೋಡಿ ಹೋಗಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಎಸ್.ಎನ್.ಕಿರಣ್‌ಶಂಕರ್ ಅವರು ಇತ್ತೀಚಿಗೆ ನಿಜಲಿಂಗಪ್ಪನವರ 'ಮನೆ ಮಾರಾಟಕ್ಕಿದೆ' ಎಂದು ಪತ್ರಿಕೆಗೆ ಜಾಹೀರಾತು ಕೂಡಾ ನೀಡಿದ್ದರು. ಈ ಬೆಳವಣಿಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಸಭೆ ನಡೆಸಿ, ಮನೆ ಖರೀದಿಸಲು ನಿರ್ಧಾರ ಮಾಡಿತ್ತು.
ಮೊಮ್ಮಗ ವಿನಯ್ ಹೆಸರಿನಲ್ಲಿದ್ದ ಮನೆ: ನಿಜಲಿಂಗಪ್ಪ ಅವರ ವಿನಯ ನಿವಾಸ ಅಮೆರಿಕದಲ್ಲಿರುವ ಅವರ ಮೊಮ್ಮಗ ವಿನಯ್ ಹೆಸರಿನಲ್ಲಿತ್ತು. ವಿನಯ್ ಅವರು ತಂದೆ ಎಸ್.ಎನ್.ಕಿರಣ್ ಶಂಕರ್ ಅವರಿಗೆ ಜನರಲ್ ಪವರ್ ಆಫ್ ಅಟಾರ್ನಿ ನೀಡಿದ್ದರು. ಅದನ್ನು ಪರಿಗಣಿಸಿ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, 4,18,49,016 ರೂಪಾಯಿ ಮೊತ್ತಕ್ಕೆ ಮನೆಯನ್ನು ರಾಜ್ಯ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ಖರೀದಿಸಲಾಗಿದೆ.
ಈ ವಿಚಾರವಾಗಿ ಎಸ್.ಎನ್.ಸ್ಮಾರಕ ಟ್ರಸ್ಟ್ ಸಂಯೋಜಕ ಎಸ್.ಷಣ್ಮುಖಪ್ಪ ಪ್ರತಿಕ್ರಿಯಿಸಿ, "ಮನೆ ನೋಂದಣಿ ಪ್ರಕ್ರಿಯೆ ಮುಗಿದಿದೆ. ಸರ್ಕಾರದ ಪರವಾಗಿ ತಹಶೀಲ್ದಾರ್ ಮೂಲಕ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಲಾಗಿದೆ. ತಹಶೀಲ್ದಾರ್‌ಗೆ ನೋಂದಣಿ ಪತ್ರಗಳನ್ನು ಹಸ್ತಾಂತರ ಮಾಡಿದ್ದೇವೆ" ಎಂದರು.
ಇದನ್ನೂ ಓದಿ: ಮಾಜಿ ಸಿಎಂ ನಿಜಲಿಂಗಪ್ಪ ಮನೆ ಖರೀದಿಸಿ ಒಂದು ತಿಂಗಳಲ್ಲಿ ನೋಂದಣಿ: ಸಚಿವ ಶಿವರಾಜ್ ತಂಗಡಗಿ - NIJALINGAPPA HOUSE