ಪುತ್ತೂರು(ದಕ್ಷಿಣ ಕನ್ನಡ): ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ 'ಕಾಂತಾರ'ದ ದೃಶ್ಯವೊಂದನ್ನು ನೆನಪಿಸುವ ಮತ್ತು ತುಳುನಾಡಿನ ದೈವಾರಾಧನೆಗೆ ಸಂಬಂಧಪಟ್ಟಂತೆ ಚಿತ್ರದಲ್ಲಿ ಮೂಡಿಬಂದ ಎಲ್ಲವೂ ವಾಸ್ತವಕ್ಕೆ ಅತ್ಯಂತ ಹತ್ತಿರವಿರುವ ಸಂಗತಿ. ಇದೀಗ ಅಂತಹದ್ದೇ ಒಂದು ಸನ್ನಿವೇಶ ರೂಪಿಸುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲಿ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಎಲ್ಲೆಡೆ ಭಾರಿ ಸುದ್ಧಿ ಮಾಡಿತ್ತು. ಈ ರೀತಿಯ ಅವಘಡ ದೈವಾರಾಧನೆ ನಡೆಯುತ್ತಿರುವ ಸಂದರ್ಭದಲ್ಲಿ ನಡೆದಾಗ ಸಾಮಾನ್ಯವಾಗಿ ಎಲ್ಲರ ಕುತೂಹಲಕ್ಕೂ ಕಾರಣವಾಗುತ್ತದೆ. ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲ ಅಕಾಲಿಕ ಸಾವನ್ನಪ್ಪಿದ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು. ದೈವಜ್ಞರ ಪ್ರಶ್ನೆಯಲ್ಲಿ ಕಂಡುಬಂದಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಯಿತು.
ಈ ನೇಮಕ ಪ್ರಕ್ರಿಯೆಯ ಹಿಂದೆ ದೈವಾರಾಧನೆಯ ಎಲ್ಲಾ ಕಟ್ಟುಪಾಡುಗಳು ಅನ್ವಯವಾಗುತ್ತಿದ್ದು, ಶಿರಾಡಿ ದೈವದ ಒಪ್ಪಿಗೆಯನ್ನೂ ಪಡೆಯಲಾಗಿತ್ತು. ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಿ, ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವದ ಸೇವೆಯನ್ನು ಮಾಡಬೇಕು ಅನ್ನೋದನ್ನು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿಯಾಗಿತ್ತು.
ಯಾವ ರೀತಿ ಕಾಂತಾರ ಚಿತ್ರದಲ್ಲಿ ಒಂದು ದೃಶ್ಯ ಕಂಡುಬಂದಾಗ ದೈವ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧದ ಅನಾವರಣವಾಗಿತ್ತೋ, ಅದೇ ರೀತಿಯ ಸನ್ನಿವೇಶ ಎಡಮಂಗಲದಲ್ಲೂ ನಿರ್ಮಾಣವಾಗಿತ್ತು. ದೈವದ ನರ್ತನ ಸೇವೆಯನ್ನು ಪಡೆದ ಯುವಕರ ಕಣ್ಣಲ್ಲಿ ಆನಂದಭಾಷ್ಪ ಕಂಡರೆ, ಕುಟುಂಬದ ಸದಸ್ಯರಲ್ಲಿ ಧನ್ಯತೆಯ ಭಾವ ಕಂಡುಬಂದಿತ್ತು. ದೈವ ನರ್ತಕನ ದೀಕ್ಷೆ ಬೂಳ್ಯ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆಯನ್ನು ಸುತ್ತಿ ಮನೆ ಮಂದಿಯ ಹಾಗು ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಬಳಿಕ ನಾಲ್ವರು, ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ದೀಕ್ಷೆ ಬೂಳ್ಯವನ್ನು ನೀಡಲಾಗುತ್ತದೆ.
ದೈವ ತನ್ನ ನರ್ತಕನಿಗೆ ತನ್ನ ಸೇವೆ ಮಾಡುವಂತೆ ನೀಡುವ ಈ ದೀಕ್ಷೆ ದೈವಾರಾಧನೆಯಲ್ಲಿ ಅತ್ಯಂತ ಮಹತ್ವದ ವಿಚಾರವೂ ಆಗಿದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವ.
ದೀಕ್ಷೆ ಪಡೆದ ಬಳಿಕ ದೈವ ನರ್ತಕ ನಾಲ್ಕು ಗ್ರಾಮಕ್ಕೆ ಸಂಬಂಧಪಟ್ಟ ದೈವಗಳ ಸೇವೆಯ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ ಹಾಗು ಪರವೂರಿನ ದೈವಭಕ್ತರು ಭಾಗವಹಿಸುವುದು ತುಳುನಾಡಿನ ದೈವಾರಾಧನೆಯ ವಿಶೇಷತೆಯೂ ಆಗಿದೆ.
ಇದನ್ನೂ ಓದಿ: ದೈವ ಸನ್ನಿಧಿಯಲ್ಲಿ 'ಕಾಂತಾರ' ನಟ: ಕೋಲದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ