ಬೆಂಗಳೂರು: ''ಜಾತಿ ಗಣತಿ ಸಂಬಂಧ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆಯುತ್ತೇವೆ. ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ''ಜಾತಿ ಜನಗಣತಿ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಷ್ಟೇ ನಾವು ಹೇಳ್ತಿಲ್ಲ. ಪಾರ್ಲಿಮೆಂಟ್ ಚುನಾವಣೆ ವೇಳೆ ಹೇಳಿದ್ದೇವೆ. ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆಯುತ್ತೇವೆ. ಆನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಕರ್ನಾಟಕದಲ್ಲಿ ಜಾತಿ ಜನಗಣತಿ ಜಾರಿ ವಿಚಾರವಾಗಿ ಇಲ್ಲಿರುವ ನಾಯಕರನ್ನೇ ಕೇಳಿ'' ಎಂದರು.
ಹರಿಯಾಣ ಚುನಾವಣೆ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿ, ''ಹರಿಯಾಣ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತೆಂದು ನಾವು ಮೊದಲೇ ಹೇಳಿದ್ದೇವೆ. ಜಮ್ಮುವಿನಲ್ಲಿ ಕಾಂಗ್ರೆಸ್ ಎನ್ಸಿ ಅಲಯನ್ಸ್ ಅಧಿಕಾರಕ್ಕೆ ಬರಲಿದೆ'' ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಎನ್.ಎಸ್.ಬೋಸರಾಜು, ''ಜಾತಿ ಜನಗಣತಿ ಜಾರಿ ಸಂಬಂಧ ಸಾಧಕ, ಬಾಧಕ ನೋಡಿ ಮಾಡುವಂತೆ ತಿಳಿಸಿದ್ದಾರೆ. ಇಂದು ಸಿಎಂ ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಜಾರಿ ಮಾಡಿ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಇದು ಕ್ಯಾಬಿನೆಟ್ ಮುಂದೆ ಬರುತ್ತದೆ. ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಸಮಾಜವನ್ನೂ ಒಗ್ಗೂಡಿಸಿಕೊಂಡು ಹೋಗುತ್ತೇವೆ. ಬಿಜೆಪಿಯವರ ತರಹ ನಾವು ಮಾಡುವುದಿಲ್ಲ. ಆ ರೀತಿ ಮಾಡಿದರೆ, ಮೂರು ದಿನದಲ್ಲಿ ಒಡೆದು ಹೋಗುತ್ತದೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕಾಂಗ್ರೆಸ್ಗೆ ಇದೆ. ಹೈಕಮಾಂಡ್ಗೂ ಇದೆ'' ಎಂದರು.
''ಇಲ್ಲಿ ವೈಯಕ್ತಿಕ ಪ್ರಶ್ನೆಯೇ ಬರುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಗಣತಿ ಜಾರಿಗೆ ಬರಬೇಕು. ವರದಿ ಏನಿದೆ ಎಂದು ಚರ್ಚೆ ಮಾಡಬೇಕು. ಸಿಎಂ ಪೂರ್ತಿಯಾಗಿ ನೋಡಿಲ್ಲ ಎಂದಿದ್ದಾರೆ. ಇವತ್ತು ಭೇಟಿ ಮಾಡಿ ವಿನಂತಿ ಮಾಡ್ತೇವೆ'' ಎಂದು ಬೋಸರಾಜು ತಿಳಿಸಿದರು.
ಖರ್ಗೆಯವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ''ನಾವು ಇನ್ಯಾರನ್ನು ಭೇಟಿ ಮಾಡಬೇಕು. ಅವರನ್ನೇ ನಾವು ಭೇಟಿ ಮಾಡಬೇಕು. ಡಿಕೆಶಿ ಇದೇ ಮೊದಲ ಸಲ ಭೇಟಿ ಮಾಡಿದ್ದಾರಾ?. ಬೆಳಗ್ಗೆಯಿಂದ ಸಾಯಂಕಾಲದ ತನಕ ಭೇಟಿ ಮಾಡ್ತಾರೆ. ಪರಮೇಶ್ವರ್ ಇದ್ದಾಗಲೂ ಭೇಟಿ ಮಾಡುತ್ತಿದ್ದರು'' ಎಂದು ಹೇಳಿದರು.
ಇದನ್ನೂ ಓದಿ: ಮಸಿ ಬಳಿಯಲು ಯತ್ನಿಸುತ್ತಿದ್ದಾರೆ, ಆ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ : ಸಿಎಂ ಸವಾಲು - CM Siddaramaiah