ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ ಅವರು ಮಾರ್ಚ್ 20 ರಿಂದ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಖಂಡರ ಜೊತೆ ಚುನಾವಣಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಮಾರ್ಚ್ 20 ರಂದು ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಆಗಮಿಸಿ ಪ್ರಚಾರ ಶುರು ಮಾಡುತ್ತಾರೆ. ಮಾರ್ಚ್ 17 ರಂದು ಪೂರ್ವಭಾವಿ ಸಭೆ ಆಯೋಜಿಸಿದ್ದು, ಮಾರ್ಚ್ 20 ರಿಂದ ಚುನಾವಣೆ ಪ್ರಚಾರ ಆರಂಭಿಸುತ್ತೇವೆ. ಆ ಮೇಲೆ ನಿರಂತರ ಚುನಾವಣೆ ಪ್ರಚಾರ ಪ್ರಕ್ರಿಯೆ ನಡೆಯುತ್ತವೆ ಎಂದು ತಿಳಿಸಿದರು.
20 ರಂದು ಶಿವಣ್ಣ ಕೂಡ ಆಗಮಿಸುವರು. ಚುನಾವಣಾ ಪ್ರಚಾರದಲ್ಲಿ ನಟ ಶಿವಣ್ಣ ಕೂಡ ಎಲ್ಲ ಕಡೆ ಓಡಾಡುತ್ತಾರೆ. ಬೇರೆ ಕಡೆ ಶಿವಣ್ಣ ಪ್ರಚಾರದ ಬಗ್ಗೆ ಶಿವಣ್ಣ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಮೇಲೆ ಚುನಾವಣೆ ಎದುರಿಸುತ್ತೇವೆ: ಗ್ಯಾರಂಟಿ ವಿಷಯ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಗ್ಯಾರಂಟಿ ಯೋಜನೆ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ವಿಶ್ವಾಸ ಬಂದಿದೆ, ಜನರು ಪಕ್ಷ ಹಾಗೂ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಗ್ಯಾರಂಟಿ ಮೇಲೆ ಜನರು ವಿಶ್ವಾಸ ಇಟ್ಟು ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದು, ಗ್ಯಾರಂಟಿ ನಮ್ಮನ್ನು ಗೆಲ್ಲಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಹಣ ತೆಗೆದುಕೊಂಡಿದ್ದಾರೆ. ದುಡ್ಡು ವಾಪಸ್ ಕೊಟ್ಟಿಲ್ಲ, ಅವರದು ಏನು ಸಾಧನೆ ಎಂದು ಪ್ರಶ್ನಿಸಿದರು. ಬೇರೆ ರಾಜ್ಯಕ್ಕೆ ದುಡ್ಡು ಕೊಟ್ಟಿದ್ದಾರೆ, ನಮಗೆ ಕೊಟ್ಟಿಲ್ಲ. ಸಂಸದ ರಾಘವೇಂದ್ರ ಅವರದು ಏನು ಕೊಡುಗೆ ಇದೆ ಎಂದು ಪ್ರಶ್ನಿಸಿದ ಅವರು, ಹಣ ಇತ್ತು ಅಷ್ಟೇ, ಹಾಗಾಗಿ ಅದನ್ನ ಬಿಡಬೇಕು. ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ. ಗೀತಾ ಶಿವರಾಜ್ ಕುಮಾರ್ ಬಹಳ ಆ್ಯಕ್ಟಿವ್ ಆಗಿ ಅವರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ ಎಂದು ಹೇಳಿದರು. ಚುನಾವಣಾ ಫಲಿತಾಂಶದ ನಂತರ ಸಂಸದರಾಗಿ ಗೀತಾ ಶಿವರಾಜ್ ಕುಮಾರ್ ಅವರ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜಿಲ್ಲೆಯ ಧ್ವನಿಯಾಗಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 400 ಚುನಾವಣೆ ಸಭೆಗಳ ಆಯೋಜನೆ: ಗೀತಾ ಶಿವರಾಜ್ ಕುಮಾರ್ 400 ಚುನಾವಣಾ ಸಭೆಯಲ್ಲಿ ಭಾಗವಹಿಸುವರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಾಲೂಕು ಮಟ್ಟಕ್ಕೆ ಕರೆಯಿಸಬೇಕು ಅಂದುಕೊಂಡಿದ್ದೇವೆ. ಶಿವಣ್ಣ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡಬೇಕು ಅಂದುಕೊಂಡಿದ್ದೇವೆ. ಕ್ಷೇತ್ರದಲ್ಲಿ ನಾವು ಗೆದ್ದೆ ಗೆಲ್ಲುತ್ತೆವೆ. ಜನರು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂಓದಿ:ಪಕ್ಷ, ದೇಶದ ಹಿತ ನೋಡಿ ಈಶ್ವರಪ್ಪ ತೀರ್ಮಾನ ಕೈಗೊಳ್ಳಲಿ: ಸಿ ಟಿ ರವಿ