ದಾವಣಗೆರೆ: "ಸಿಎಂ ಬಾಯಿಯಿಂದ ಏನೇ ಬಂದರೂ ನನಗದು ಆಶೀರ್ವಾದ. ಲೋಕಸಭೆ ಚುನಾವಣೆಯಲ್ಲಿ 4 ಲಕ್ಷ ಮತಗಳಿಸಿ ಗೆದ್ದು ಸಂಸದನಾಗುವ ವಿಶ್ವಾಸ ನನಗಿದೆ" ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ತಿಳಿಸಿದರು.
ದಾವಣಗೆರೆ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಕ್ಷೇತ್ರದಲ್ಲಿ ಸಿದ್ದೇಶ್ವರ, ಶಾಮನೂರು ರಾಜಕೀಯದಿಂದಾಗಿ ಅಹಿಂದ ವರ್ಗಕ್ಕೆ ಅವಕಾಶ ಸಿಗುತ್ತಿಲ್ಲ. ನಾನು ಪಕ್ಷೇತರನಾಗಿ ನಿಂತ ಮೇಲೆ ಪ್ರತಿ ಹಳ್ಳಿಯಲ್ಲಿಯೂ ಜನರು ನನ್ನನ್ನು ಗೆಲ್ಲಿಸಲು ಮುಂದಾಗಿದ್ದಾರೆ" ಎಂದರು.
"ನಾನು ಎಲ್ಲೆಲ್ಲಿ ಪ್ರವಾಸ ಮಾಡುತ್ತೇನೋ ಅಲ್ಲಿ ಲೋಕಲ್ ಲೀಡರ್ಸ್ಗೆ ಬಿಜೆಪಿ, ಕಾಂಗ್ರೆಸ್ ನಾಯಕರಿಂದ ಬೆದರಿಕೆ ಬರುತ್ತಿದೆ. ಜನರು ಕುಟುಂಬ ರಾಜಕಾರಣದಿಂದ ನೊಂದಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಸಾಹೇಬರ ಮೇಲೆ ನನಗೆ ಅಪಾರ ಪ್ರೀತಿ, ಗೌರವವಿದೆ. ನನ್ನ ಹೆಸರು ದಿಲ್ಲಿವರೆಗೂ ಹೋಗೋದಕ್ಕೆ ಸಿಎಂ ಸಾಹೇಬರು ಕಾರಣ. ಅವರು ಕೈ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳುವ ಮೂಲಕ ವಿನಯ್ಗೆ ವೋಟ್ ಮಾಡಬೇಡಿ ಎಂದಿದ್ದಾರೆ. ಅದು ತಪ್ಪು ಎಂದು ನಾನು ಹೇಳುವುದಿಲ್ಲ. ಕ್ಷೇತ್ರದಲ್ಲಿ ಯೂತ್, ಅಲ್ಪಸಂಖ್ಯಾತರು ನನ್ನ ಪರವಾಗಿದ್ದಾರೆ" ಎಂದು ಹೇಳಿದರು.
"ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲದಂತೆ ನನಗೆ ಸ್ವಾಮೀಜಿ, ಸಿಎಂ ಗಿಣಿಗೆ ಹೇಳಿದಂತೆ ಹೇಳಿರೋದು ನಿಜ. ಆದರೆ ಹೊರಬಂದಾಗ ನಾನು ನನ್ನ ನಿರ್ಧಾರ ಕೈಗೊಳ್ಳುವ ಅನಿವಾರ್ಯ ಬಂದಿತ್ತು. ನಾನು ಯಾವತ್ತೂ ಕೂಡ ಅಡ್ಡದಾರಿ ಹಿಡಿದಿಲ್ಲ. ರಾಜಕಾರಣದಲ್ಲಿಯೂ ಹಾರ್ಡ್‌ವರ್ಕ್ ಮಾಡುವುದು ನಮ್ಮ ಧ್ಯೇಯ. ನಾನು ಗೆದ್ದರೆ ಪಕ್ಷೇತರವಾಗಿಯೇ ಇರುತ್ತೇನೆ" ಎಂದರು.