ದಾವಣಗೆರೆ: ಇಲ್ಲಿನ ಬಿಜೆಪಿ ಅಭ್ಯರ್ಥಿಗೆ ಮಾತಾಡೋಕೆ ಬರಲ್ಲ, ಅವರು ಅಡುಗೆ ಮಾಡೋಕೆ ಲಾಯಕ್ಕು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಜಗಳೂರು ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿರುವ ಅವರು ಶಾಮನೂರು ಹೇಳಿಕೆ ಬಗ್ಗೆ ಮಾತನಾಡಿ, ಮಹಿಳೆಯರು ಡಿಸಿ, ಎಸ್ಪಿಗಳಾಗಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬಂದಿದ್ದಾರೆ. ಹೀಗಾಗಿ ಮಹಿಳೆಯ ಬಗ್ಗೆ ಸಣ್ಣತನದ ಮಾತುಗಳನ್ನಾಡಬೇಡಿ ಎಂದು ಶಾಮನೂರು ಶಿವಶಂಕರಪ್ಪನವರಿಗೆ ಹೇಳುತ್ತೇನೆ ಎಂದು ತಿರುಗೇಟು ನೀಡಿದರು.
ಯಾರು ಹುಟ್ಟುತ್ತಿದ್ದಂತೆ ನಡೆಯಲು ಪ್ರಾರಂಭಿಸುವುದಿಲ್ಲ. ನಾನು ಎಲ್ಲವನ್ನು ಕಲಿಯುತ್ತೇನೆ. ನಾನು ಮನೆಯಲ್ಲಿ ಅಡುಗೆ ಮಾಡಿ, ಕಾರ್ಯಕರ್ತರಿಗೆ ಊಟಕೊಟ್ಟು ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದೇನೆ. ದೇಶಕ್ಕೆ ಹೆಣ್ಣು ಮಕ್ಕಳು ಏನೇನು ಕೊಡುಗೆ ಕೊಟ್ಟಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಅವರು ಇನ್ನೂ ಹಳೇ ಕಾಲದಲ್ಲೇ ಇದ್ದಾರೆ. ಹೆಣ್ಣು ಮಕ್ಕಳು ಯಾವುದರಲ್ಲಿ ಕಡಿಮೆ ಇದ್ದಾರೆ ಹೇಳಿ ಎಂದು ಪ್ರಶ್ನಿಸಿದರು. ನಿಮ್ಮೆಲ್ಲರ ಸೇವೆ ಮಾಡಲು ನಾನು ಸಿದ್ಧಳಿದ್ದೇನೆ. ನನಗೆ ನಿಮ್ಮ ಅಮೂಲ್ಯ ಮತ ಹಾಕಿ ಗೆಲ್ಲಿಸಬೇಕು, ಕೇಂದ್ರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿಯಿಂದಲೂ ಬಿರುಸಿನ ಪ್ರಚಾರ: ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಸಂಚಾರ ಮಾಡುತ್ತ ಪ್ರಚಾರ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಇಂದು ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಜಗಳೂರು ತಾಲೂಕಿನಲ್ಲಿ ಪ್ರಚಾರ ಮಾಡಿದರು. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಬುಡಕಟ್ಟು ಜನರು ಕಂಬಳಿ ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದರು. ಇದೇ ವೇಳೆ ಬುಡಕಟ್ಟು ದೈವಗಳಿಗೆ ಅವರು ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಕೋಟ್ಯಂತರ ಹಣ ಲೂಟಿ ಮಾಡಿದೆ, ಹೀಗಾಗಿ ಐಟಿ ನೋಟಿಸ್ ಕೊಟ್ಟಿದೆ: ಪ್ರಹ್ಲಾದ್ ಜೋಶಿ - IT NOTICE