ಗಂಗಾವತಿ: ಕೈ ತುಂಬಾ ಆದಾಯ ಸಿಗದೆಂಬ ಕಾರಣಕ್ಕೆ ಕೃಷಿಯಲ್ಲಿ ಯುವಕರು ಖುಷಿ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಇಲ್ಲೊಬ್ಬ ರೈತ, ವಿದೇಶಿ ತಳಿಯ ಸಜ್ಜೆ ಬೆಳೆದು ಕೇವಲ ಮೂರ್ನಾಲ್ಕು ತಿಂಗಳಲ್ಲೇ ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಕೇಸರಹಟ್ಟಿ ಗ್ರಾಮದ ರೈತ ಶರಣಪ್ಪ ಲಾಯದುಣಿ ಎಂಬವರು ತಮ್ಮ 40 ಎಕರೆ ಜಮೀನಿನ ಪೈಕಿ ಪ್ರಯೋಗಾರ್ಥವಾಗಿ ಆರು ಎಕರೆಯಲ್ಲಿ ಟರ್ಕಿ ದೇಶದ ಸಜ್ಜೆ ಬೆಳೆದಿದ್ದಾರೆ. ಸ್ವದೇಶಿ ತಳಿಯ ಸಜ್ಜೆ ಹಾಕಿದರೆ ಗಿಡ ಮೂರರಿಂದ ನಾಲ್ಕು ಅಡಿ ಬೆಳೆಯುತ್ತದೆ. ಒಂದು ಗಿಡಕ್ಕೆ ಒಂದು ತೆನೆ ಬರುತ್ತದೆ. ತೆನೆ ಒಂದರಿಂದ ಒಂದೂವರೆ ಅಡಿ ಮಾತ್ರ ದೊಡ್ಡದಿರುತ್ತದೆ. ಆದರೆ ಟರ್ಕಿ ದೇಶದ ಸಜ್ಜೆಯ ಗಿಡ ನಾಲ್ಕರಿಂದ ಐದಡಿ ಎತ್ತರವಿದೆ. ಎರಡರಿಂದ ಮೂರು ತೆನೆ ಬಂದಿದೆ. ಒಂದೊಂದು ತೆನೆಯೂ ಮೂರರಿಂದ ಐದು ಅಡಿ ಎತ್ತರವಿದೆ. ಇಷ್ಟು ದೊಡ್ಡ ತೆನೆಯಲ್ಲಿ ಸಂಪೂರ್ಣ ಕಾಳುಕಟ್ಟಿದೆ. ರೈತ ತನ್ನ ಭೂಮಿಯಲ್ಲಿ ಒಣ ಬೇಸಾಯ ಪದ್ಧತಿಯಲ್ಲಿ ನಾಟಿ ಮಾಡಿದ್ದು, ಎಕರೆಗೆ 13-15 ಕ್ವಿಂಟಲ್ ಇಳುವರಿ ಪಡೆದುಕೊಂಡಿದ್ದಾರೆ.
ಉತ್ತಮ ನೀರಾವರಿಯಲ್ಲಿ ಇಳುವರಿ ಅಧಿಕ: ಈ ಸಜ್ಜೆಯನ್ನು ಒಣ ಬೇಸಾಯದ ಕೃಷಿ ಮಾಡಿದರೆ ಲಾಭ ಕಡಿಮೆ. ಒಣ ಬೇಸಾಯದಲ್ಲಿ 13-15 ಕ್ವಿಂಟಲ್ ಇಳುವರಿ ಬಂದಿದೆ. ಅದೇ ನೀರಾವರಿ ಪ್ರದೇಶದಲ್ಲಿ 20ರಿಂದ 22 ಕ್ವಿಂಟಲ್ ಇಳುವರಿ ಪಡೆಯಬಹುದು ಎಂದು ಶರಣಪ್ಪ ಹೇಳುತ್ತಾರೆ.
"ನಮ್ಮ ಸ್ವದೇಶಿ ತಳಿಯ ಸಜ್ಜೆಗಳನ್ನು ಒಣ ಬೇಸಾಯ ಪದ್ಧತಿಯಲ್ಲಿ ಬೆಳೆದರೆ 8ರಿಂದ 10 ಕ್ವಿಂಟಲ್ ಹಾಗು ನೀರಾವರಿಯಲ್ಲಿ ಬೆಳೆದರೆ 10ರಿಂದ 12 ಕ್ವಿಂಟಲ್ ಇಳುವರಿ ಪಡೆಯಬಹುದು. ಸದ್ಯಕ್ಕೆ ಸಜ್ಜೆಗೆ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 2,500ರಿಂದ 2,600 ರೂಪಾಯಿ ಧಾರಣೆ ಇದೆ" ಎಂದು ತಿಳಿಸಿದರು.
"ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ಹೇರೂರು ಎಂಬ ಗ್ರಾಮದಲ್ಲಿ ನಮ್ಮ ಸಂಬಂಧಿಕರಿದ್ದಾರೆ. ಒಮ್ಮೆ ಅವರ ಮನೆಗೆ ಹೋಗಿದ್ದಾಗ ಆಕಸ್ಮಿಕವಾಗಿ ಹೊಲಕ್ಕೆ ತೆರಳಿ ಈ ಸಜ್ಜೆ ನೋಡಿದ್ದೆ. ಈ ಕುರಿತು ಕೇಳಿದಾಗ ನನ್ನ ಹೊಲದಲ್ಲಿಯೂ ಸಜ್ಜೆ ನಾಟಿ ಮಾಡಬೇಕೆಂಬ ಬಯಕೆ ಹುಟ್ಟಿತು. ಹೀಗಾಗಿ ಅವರಿಂದ ಬೀಜ ತರಿಸಿಕೊಂಡು ನಾಟಿ ಮಾಡಿದೆ. ನಾಟಿ ಬೀಜಕ್ಕೆ ಪ್ರತಿ ಕೆ.ಜಿಗೆ 500 ರೂಪಾಯಿ ಇದೆ. ಬೆಳೆ ನಾಟಿ ಮಾಡಿದ ಬಳಿಕ ದೊಡ್ಡ ಮೊಟ್ಟದ ಖರ್ಚು ಮಾಡಿಲ್ಲ" ಎಂದು ರೈತ ಶರಣಪ್ಪ ವಿವರ ನೀಡಿದರು.
ಖರ್ಚು ಕಡಿಮೆ..: "ಬೀಜ ಖರೀದಿ, ಗೊಬ್ಬರ, ಕೃಷಿ ಕಾರ್ಮಿಕರ ಬಳಕೆ, ಕಳೆ ನಾಶ ಹೀಗೆ ಎಲ್ಲವೂ ಸೇರಿ ಎಕರೆಗೆ 18ರಿಂದ 20 ಸಾವಿರ ರೂ ಖರ್ಚಾಗಿದೆ. ಆರು ಎಕರೆಗೆ ಒಂದು ಲಕ್ಷ ಖರ್ಚಾಗಿದ್ದು, ಇದೀಗ ಮೂರುವರೆ ಲಕ್ಷ ಮೊತ್ತದ ಆದಾಯ ನಿರೀಕ್ಷಿಸುತ್ತಿದ್ದೇನೆ" ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ ಲಿಂಬೆಗೆ ಭಾರೀ ಬೇಡಿಕೆ: ಭರ್ಜರಿ ಆದಾಯ ಗಳಿಸುತ್ತಿರುವ ರೈತರು - Lemon Nursery