ಗಂಗಾವತಿ: ಸಹದ್ಯೋಗಿ ಯುವತಿಯನ್ನು ಪ್ರವಾಸಕ್ಕೆ ಎಂದು ಕರೆತಂದು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿ, ಆಕೆ ನಿದ್ರೆಯ ಮಂಪರಿನಲ್ಲಿದ್ದಾಗ ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ, ಅತ್ಯಾಚಾರ ಎಸಗಿದ ಇಬ್ಬರು ಅಪರಾಧಿಗಳಿಗೆ ತಲಾ ಮೂರು ಲಕ್ಷ ರೂಪಾಯಿ ದಂಡ ಮತ್ತು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಯಲ್ಲಿ ವಿಫಲವಾದರೆ ಹೆಚ್ಚುವರಿ ಐದು ವರ್ಷ ಸಜೆ ವಿಧಿಸಲಾಗಿದೆ.
ಅಪರಾಧಿಗಳನ್ನು ಉತ್ತರ ಪ್ರದೇಶದ ಫಾರೂಕಾಬಾದ್ನ ಸಾಫ್ಟ್ವೇರ್ ಎಂಜಿನಿಯರ್ ರೋಹಿತ್ ಪ್ರಮೋದ್ ಮಂಗಲಿಕ್ ಮತ್ತು ರಾಜಸ್ಥಾನದ ಸಿಕ್ಕರ್ ಜಿಲ್ಲೆಯ ರಾಜಕುಮಾರ್ ಮದನಾಲ್ ಸೈನಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಸಂತ್ರಸ್ತ ಯುವತಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿವರ ಹೀಗಿದೆ: ಹೈದರಾಬಾದ್ನ ಖಾಸಗಿ ಕಂಪನಿಯಲ್ಲಿ ಸಂತ್ರಸ್ತ ಮಹಿಳೆಯೊಂದಿಗೆ ಈ ಇಬ್ಬರು ಯುವಕರು ಕೆಲಸ ಮಾಡುತ್ತಿದ್ದರು. 2015ರಲ್ಲಿ ಪ್ರವಾಸಕ್ಕೆ ಎಂದು ಗಂಗಾವತಿ ತಾಲೂಕಿನ ಆನೆಗೊಂದಿ ಹೋಬಳಿಯ ವಿರುಪಾಪುರ ಗಡ್ಡೆಗೆ ಈ ಯುವತಿಯನ್ನು, ಯುವಕರು ಕರೆತಂದಿದ್ದರು. ಹೇಮಾ ಗೆಸ್ಟ್ ಹೌಸ್ ಎಂಬಲ್ಲಿ ರೂಂ ಬಾಡಿಗೆ ಪಡೆದು ತಂಗಿದ್ದರು.
ರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಯುವತಿ ಸೇವಿಸುತ್ತಿದ್ದ ತಂಪು ಪಾನೀಯದಲ್ಲಿ ಆಕೆಗೆ ಗೊತ್ತಾಗದಂತೆ ಮತ್ತು ಬರಿಸುವ ಮಾದಕ ದ್ರವ್ಯ ಸೇರಿಸಿ ಕುಡಿಸಿದ್ದರು. ಅದನ್ನು ಕುಡಿದ ಆಕೆ ನಿದ್ರೆಗೆ ಶರಣಾಗಿದ್ದಳು. ಬಳಿಕ ಈ ಇಬ್ಬರೂ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದರು ಎಂದು ಯುವತಿ ಆರೋಪಿಸಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿ ಗ್ರಾಮೀಣ ಠಾಣೆಯ ಅಂದಿನ ಸಿಪಿಐ ಪ್ರಭಾಕರ ಧರ್ಮಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ಅವರು ವಾದ ಮಂಡಿಸಿದ್ದರು. ಇದೀಗ ಮಹಿಳೆಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿದ್ದು, ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಬಸ್ನಲ್ಲಿ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಿರ್ವಾಹಕನಿಗೆ 2 ವರ್ಷ ಜೈಲು ಶಿಕ್ಷೆ