ರಾಮನಗರ: ಜೂಜಾಟಕ್ಕೆ ರಾಮನಗರದಲ್ಲಿ ಬ್ರೇಕ್ ಬೀಳಲಿದೆ. ಯುಗಾದಿ ಹಬ್ಬದಂದು ಜೂಜಾಟ ನಡೆಸಿದರೆ ಕೇಸ್ ಬೀಳೋದು ಗ್ಯಾರಂಟಿ ಎಂದು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹೊಸ ವರ್ಷದ ಆರಂಭವೇ ಯುಗಾದಿ ಹಬ್ಬ. ಎಲ್ಲೆಡೆ ಸಡಗರದ ವಾತಾವರಣವಿರುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದು ಸಾಮಾನ್ಯ. ಇದರ ಜತೆಗೆ ಕೆಲವರು ಜೂಜಾಡುವುದೂ ಉಂಟು. ಈ ಜೂಜಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ರಾಮನಗರ ಜಿಲ್ಲಾ ಪೊಲೀಸ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಯುಗಾದಿಯಂದು ಎಲ್ಲಾ ಮಾದರಿಯ ಜೂಜಾಟಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಜೂಜಾಟಕ್ಕೆ ಮುಂದಾದವರು ಹಾಗೂ ಜೂಜು ಅಡ್ಡೆ ನಡೆಸುವವರ ಮೇಲೂ ಗೂಂಡಾ ಕಾಯ್ದೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಪ್ರಕಟಣೆ: ಏ.9ರಂದು ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೋಟೆಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ಕ್ಲಬ್‌ಗಳು ಇನ್ನಿತರ ಸ್ಥಳಗಳು ಮತ್ತು ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಟ ಆಡುತ್ತಾರೆ ಎಂದು ತಿಳಿದುಬಂದಿದೆ. ಅವುಗಳೆಲ್ಲವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಈ ರೀತಿಯ ಯಾವುದೇ ಕಾನೂನುಬಾಹಿರ ಆಟಗಳಲ್ಲಿ ಪಾಲ್ಗೊಳ್ಳಬಾರದು. ಅದಕ್ಕೆ ಪ್ರೋತ್ಸಾಹ ನೀಡಬಾರದು. ಯಾವುದೇ ರೀತಿಯ ಜೂಜಾಟ ಕಂಡುಬಂದಲ್ಲಿ, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು, ಮಧ್ಯವರ್ತಿಗಳ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು. ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ, ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ, ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದು. ಜೂಜಾಟದಲ್ಲಿ ತೊಡಗಿರುವುದು ಕಂಡುಬಂದರೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಅಥವಾ 112ಗೆ ಫೋನ್ ಮಾಡಿ ತಿಳಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯುಗಾದಿ ಸಂದರ್ಭ ಆಡುವ ಜೂಜಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ