ತುಮಕೂರು: ಮೇ 31ರಂದು ಎಸ್ಐಟಿ ಎದುರು ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಇಂತಹದೊಂದು ಘಟನೆ ಹಿಂದೆಂದೂ ನಡೆದಿರಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಲು ಎಲ್ಲ ರೀತಿಯ ಪ್ರಯತ್ನವೂ ಎಸ್ಐಟಿಯಿಂದ ನಡೆದಿತ್ತು. ಮುಖ್ಯಮಂತ್ರಿಗಳು ಪ್ರಧಾನಿ ಮಂತ್ರಿಗಳಿಗೆ ಎರಡು ಬಾರಿ ಪತ್ರವನ್ನು ಬರೆದಿದ್ದರು. ಅಲ್ಲದೇ ಸಿಬಿಐಗೆ ಮನವಿ ಮಾಡಿ ಅಲ್ಲಿಂದ ಇಂಟರ್ಪೋಲ್ಗೂ ಕೂಡ ಮನವಿ ಮಾಡಿದ್ದೆವು. ಬ್ಲೂ ಕಾರ್ನರ್ ನೋಟಿಸ್ ಕೂಡ ನೀಡಲಾಗಿತ್ತು".
"ಅಲ್ಲದೇ ಡಿಪ್ಲೋಮೆಟಿಕ್ ಪಾಸ್ ಪೋರ್ಟ್ ಅನ್ನು ರದ್ದು ಮಾಡಬೇಕು ಅವರನ್ನು ಕರೆದುಕೊಂಡು ಬರಬೇಕೆಂದು ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ವಿದೇಶಾಂಗ ಕಾರ್ಯದರ್ಶಿಗಳು ಕೂಡ ಪ್ರಜ್ವಲ್ ಪಾಸ್ಪೋರ್ಟ್ ರದ್ದು ಮಾಡುವ ಪ್ರಕ್ರಿಯೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದರು.
ಇದೀಗ ಪ್ರಜ್ವಲ್ ರೇವಣ್ಣ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಅಲ್ಲದೇ ಅವರು ಎಸ್ಐಟಿ ಮುಂದೆ ಏನು ಹೇಳಿಕೆಯನ್ನು ನೀಡಬೇಕು ಅದನ್ನು ಹೇಳಿಕೊಳ್ಳಲಿ. ಎಸ್ಐಟಿ ಬಳಿ ಇರುವ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: Watch.. ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ: ವಿದೇಶದಿಂದ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಹೇಳಿಕೆ - MP Prajwal Revanna