ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಎನ್ಐಎ ಹಾಗೂ ಕರ್ನಾಟಕ ಪೊಲೀಸರನ್ನು ಅಭಿನಂದಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.29 ರಂದು ನಡೆದ ಸ್ಫೋಟದ ವೇಳೆ ಸಿಕ್ಕಿದ ಸಿಸಿ ಕ್ಯಾಮೆರಾ ಫುಟೇಜ್ ಸೇರಿದಂತೆ ಇತರ ಅಂಶಗಳನ್ನು ಪರಿಶೀಲಿಸಿ ತನಿಖೆ ಮಾಡುವಾಗ, ಎನ್ಐಎಗೆ ನಮ್ಮ ಪೊಲೀಸರು ಅನೇಕ ಮಾಹಿತಿ ಕೊಟ್ಟಿದ್ದರು ಎಂದು ಹೇಳಿದರು.
ಈ ಹಿಂದೆ ಶಿವಮೊಗ್ಗ ಸ್ಫೋಟದಲ್ಲಿರುವ ವ್ಯಕ್ತಿಗಳು ಎಂಬ ಅನುಮಾನ ಬಂದಾಗ ಆ ವ್ಯಕ್ತಿ ತೀರ್ಥಹಳ್ಳಿ ಮೂಲದವನೆಂದು ಗೊತ್ತಾಗಿದೆ. ಮುಸ್ಸಾವಿರ್ ಹಾಗೂ ಮತಿನ್ ಇಬ್ಬರು ಪಶ್ಚಿಮ ಬಂಗಾಳದ ದಿಗಾ ಎಂಬ ಊರಿನ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆತಂದು ಪೊಲೀಸ್ ವಶಕ್ಕೆ ಕೊಟ್ಟು ತನಿಖೆ ಮಾಡುತ್ತಾರೆ. ಇಬ್ಬರ ಬಂಧನವನ್ನು ಎನ್ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆರೋಪಿಗಳು ಕಳೆದ ನಾಲ್ಕೂವರೆ ವರ್ಷದಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಯಾವ ಸಂಘಟನೆ ಜತೆ ಅವರು ನಂಟು ಹೊಂದಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಅವರ ಹೇಳಿಕೆಗಳಿಂದಲೇ ಎಲ್ಲವೂ ಗೊತ್ತಾಗಬೇಕು. ಭಯೋತ್ಪಾದನೆ ಸಂಘಟನೆ ಜತೆ ಲಿಂಕ್ ಇದ್ದರೆ ಎನ್ಐಎ ತನಿಖೆ ಮುಂದುವರಿಸುತ್ತದೆ ಎಂದು ತಿಳಿಸಿದರು.
ಇನ್ನು, ಫೋನ್ ಕದ್ದಾಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಪರಿಮಿತಿಯಲ್ಲಿ ಟ್ಯಾಪ್ ಮಾಡಲು ಅವಕಾಶ ಕೊಟ್ಟಿಲ್ಲ. ಅಕಸ್ಮಾತ್ ಯಾರಾದ್ರೂ ಸೂಚನೆ ಕೊಟ್ಟು ಮಾಡಿಸಿದ್ದರೆ ಅದು ನನ್ನ ಗಮನಕ್ಕೆ ಬಂದಿಲ್ಲ. ಶ್ರೀಗಳಿಗ ಫೋನ್ ಕದ್ದಾಲಿಕೆ ಬಗ್ಗೆ ನಾವು ಸೂಚನೆ ಕೊಟ್ಟಿಲ್ಲ. ಅನಧಿಕೃತ ಅಥವಾ ಖಾಸಗಿ ಸಂಸ್ಥೆ ಮಾಡಿದ್ದರೆ ಗೊತ್ತಿಲ್ಲ ಎಂದು ಹೇಳಿದರು.
ಬೆಳಗಿನ ಜಾವದವರೆಗೂ ಬಾರ್ ಓಪನ್ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾವು ಸಮಯದ ನಿಗದಿ ಮಾಡಿದ್ದೇವೆ. ಆ ಸಮಯಕ್ಕೆ ಬಾರ್ಗಳು ಮುಚ್ಚಬೇಕು. ಒಂದು ಅರ್ಧ ಗಂಟೆ ತೆಗೆದಿದ್ದರೆ ಆಯಾಯ ಪ್ರದೇಶದ ಪೊಲೀಸರಿಂದ ಅನುಮತಿ ಇರುತ್ತದೆ. ಆದರೆ ಬೆಳಗಿನ ಜಾವದವರೆಗೂ ತೆರೆದಿದ್ದರೆ ಅದು ತಪ್ಪಾಗುತ್ತದೆ. ಇಂತಹ ಘಟನೆಗಳಿಗೆ ಆಯಾ ಪ್ರದೇಶದ ಡಿಸಿಪಿಗಳು ಜವಾಬ್ದಾರಿ ಆಗುತ್ತಾರೆ. ಆ ಪ್ರದೇಶಗಳ ಡಿಸಿಪಿಗಳೇ ಇದಕ್ಕೆ ಹೊಣೆಯಾಗುತ್ತಾರೆ. ಎಲ್ಲಾದರೂ ತಪ್ಪು ಕಂಡು ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಕೊನೆಗೂ ಕೋಲ್ಕತ್ತಾದಲ್ಲಿ ಇಬ್ಬರು ಮಾಸ್ಟರ್ ಮೈಂಡ್ಗಳ ಬಂಧನ - Rameshwaram Cafe blast