ಕೋಲಾರ: ಮುರುಡೇಶ್ವರದ ಸಮುದ್ರದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯರ ಮೃತದೇಹಗಳ ಅಂತ್ಯಸಂಸ್ಕಾರ ಇಂದು ಕೋಲಾರದ ಅವರ ಹುಟ್ಟೂರಿನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಹಾಗು ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು.
ಪ್ರತೀ ವರ್ಷದಂತೆ ಈ ವರ್ಷವೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳನ್ನು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮುರುಡೇಶ್ವರದ ಸಮುದ್ರದಲ್ಲಿ ಸಹಪಾಠಿಗಳೊಂದಿಗೆ ಇದ್ದಾಗ ಬೃಹತ್ ಅಲೆಗೆ ಸಿಲುಕಿ ನಾಲ್ವರು ಬಾಲಕಿಯರು ಮೃತಪಟ್ಟಿದ್ದರು.
ಸ್ಥಳೀಯ ಮೀನುಗಾರರು ಮತ್ತು ಸಿಬ್ಬಂದಿ ಮೂವರನ್ನು ರಕ್ಷಿಸಿದ್ದರು. ದುರಾದೃಷ್ಟವಶಾತ್ ನಾಲ್ವರು ಮೃತಪಟ್ಟಿದ್ದರು. ಮಂಗಳವಾರ ಸಂಜೆ ನಡೆದ ಈ ಘಟನೆಯಲ್ಲಿ ಓರ್ವ ಬಾಲಕಿಯ ಶವ ಅಂದೇ ಸಿಕ್ಕಿತ್ತು. ಇನ್ನುಳಿದ ಮೂವರು ಬಾಲಕಿಯರ ಶವಗಳು ಬುಧವಾರ ಪತ್ತೆಯಾಗಿ ಇಂದು ಕೋಲಾರ ತಲುಪಿವೆ.
ಬೆಳಗ್ಗೆ 8.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಅಂತಿಮ ನಮನ ಸಲ್ಲಿಸಿದ ನಂತರ, ಸ್ವಗ್ರಾಮಗಳಲ್ಲಿ ಅಂತಿಮ ಸಂಸ್ಕಾರ ಜರುಗಿತು. ಕೋಲಾರ ಜಿಲ್ಲಾಧಿಕಾರಿ ಮತ್ತು ಕ್ರೈಸ್ ಸಂಸ್ಥೆ ಸಿಇಒ ಸೇರಿದಂತೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ: ಸಮುದ್ರ ಪಾಲಾದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ: ಸಿಎಂ ಪರಿಹಾರ ಘೋಷಣೆ - MURUDESHWAR TRAGEDY