ಚಿಕ್ಕೋಡಿ: ಕರ್ನಾಟಕ -ಮಹಾರಾಷ್ಟ್ರ ಗಡಿಯಲ್ಲಿರುವ ಜತ್ತ ತಾಲೂಕಿನ ಗ್ರಾಮಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮರಾಠಿ ಭಾಷೆ (ಕನ್ನಡ ಬಾರದ) ಶಿಕ್ಷಕರನ್ನು ಮಹಾರಾಷ್ಟ್ರ ಸರ್ಕಾರ ನೇಮಕ ಮಾಡಿದ್ದು, ಇದು ಗಡಿನಾಡು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಜತ್ ತಾಲೂಕಿನಲ್ಲಿ 145 ಕನ್ನಡ ಮಾಧ್ಯಮ ಶಾಲೆಗಳಿದ್ದು, ಇದರಲ್ಲಿ 400 ಶಿಕ್ಷಕರ ಪೈಕಿ 280 ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 120 ಶಿಕ್ಷಕರ ಕೊರತೆ ಇರುವುದರಿಂದ ಮಹಾರಾಷ್ಟ್ರ ಗಡಿನಾಡು, ಕನ್ನಡಿಗ ಶಿಕ್ಷಕರ ನೇಮಕಾತಿ ಮಾಡುವಂತೆ ಜತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಕಳೆದ ವರ್ಷ ಪ್ರತಿಭಟನೆ ನಡೆಸಲಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿತ್ತು. ಈ ಶೈಕ್ಷಣಿಕ ವರ್ಷದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ 11 ಮರಾಠಿ ಭಾಷೆ ಶಿಕ್ಷಕರನ್ನು ನೇಮಕ ಮಾಡಿ ಸಾಂಗ್ಲಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ, ಕನ್ನಡ ಶಾಲೆಗಳಿಗೆ ಮರಾಠಿ ಭಾಷೆ ಶಿಕ್ಷಕರ ನೇಮಕ ಮಾಡಿರುವುದನ್ನು ಗಡಿನಾಡು ಕನ್ನಡಿಗರು ಖಂಡಿಸಿದ್ದಾರೆ.
ಮಲತಾಯಿ ದೋರಣೆ ಆರೋಪ; ಈ ಗಡಿನಾಡು ಕನ್ನಡಿಗ ಅಪ್ಪಾಸಾಹೇಬ ತೇಲಿ ಎಂಬುವರು ಮಾತನಾಡಿ, ಗಡಿಯಲ್ಲಿರುವ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆ ಶಿಕ್ಷಕರನ್ನು ನೇಮಕ ಮಾಡಿದೆ. ಕನ್ನಡ ಶಾಲೆಗಳಿಗೆ ಬೇರೆ ಭಾಷೆ ಮೇಸ್ಟ್ರು ಬಂದ್ರೆ ಮಕ್ಕಳಿಗೆ ಏನು ಪಾಠ ಮಾಡ್ತಾರೆ? ಮಕ್ಕಳಿಗೆ ಏನು ಅರ್ಥ ಆಗುತ್ತದೆ? ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಕನ್ನಡವನ್ನು ಕ್ರಮೇಣವಾಗಿ ಅಳಿಸಲು ಈ ಕುತಂತ್ರ ಮಾಡುತ್ತಿದೆ ಎಂದರು. ಜತ್ ತಾಲೂಕಿನಲ್ಲಿರುವ ಕನ್ನಡ ಪ್ರಾಥಮಿಕ ಶಾಲೆಗಳಿಗೆ, ಪ್ರತಿಯೊಂದು ಶಾಲೆಗಳಲ್ಲಿ ಒಂದರಿಂದ ಎಂಟನೆಯ ತರಗತಿ ಕಲಿಯೋದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಆ ಶಾಲೆಗಳಲ್ಲಿ 1 ರಿಂದ 8 ತರಗತಿ ವಿದ್ಯಾಭ್ಯಾಸಕ್ಕೆ ಇಬ್ಬರೇ ಶಿಕ್ಷಕರಿದ್ದಾರೆ. ಮಹಾ ಸರ್ಕಾರ ಕನ್ನಡ ಕಲಿಯುತ್ತಿರುವ ಮಕ್ಕಳ ಜೀವನದಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಮುಂಬರುವ ದಿನಗಳಲ್ಲಿ ಕನ್ನಡ ಶಿಕ್ಷಕರ ನೇಮಕ; ಜತ್ತ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಗಾಯಕ್ವಾಡ್ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಗಡಿಯಲ್ಲಿ ಕನ್ನಡ ಶಾಲೆಗಳಲ್ಲಿ ಹಲವು ವಿಷಯಗಳು ಇರುವುದರಿಂದ ಆಯಾ ವಿಷಯಗಳಿಗೆ ಸಂಬಂದಿಸಿದಂತೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಮುಂಬರುವ ದಿನದಲ್ಲಿ ಕನ್ನಡ ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದೆ. ಆದರೆ, ಉಭಯ ರಾಜ್ಯಗಳಲ್ಲಿ ವಿನಾಕಾರಣ ಗೊಂದಲಕ್ಕೆ ಕಾರಣವಾಗಿದೆ. ನಾನು ಮಾಧ್ಯಮಗೋಷ್ಟಿ ನಡೆಸಿ ಈಗಾಗಲೇ ಮಾಹಿತಿ ನೀಡಿರುವೆ ಎಂದು ಹೇಳಿದರು.