ಕೊಪ್ಪಳ : ಕರ್ನಾಟಕದ ಎರಡನೇ ಸಿದ್ದಗಂಗಾ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಮಠ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈ ಹಿಂದೆಯೇ ಶ್ರೀಮಠ ಉಚಿತ ಹಾಸ್ಟೆಲ್ ಆರಂಭಿಸಿದೆ. ಅದರ ಮುಂದುವರೆದ ಭಾಗವಾಗಿ ಸದ್ಯ ಐದು ಸಾವಿರ ವಿದ್ಯಾರ್ಥಿಗಳ ಉಚಿತ ಹಾಸ್ಟೆಲ್ ರೆಡಿಯಾಗಿದ್ದು, ಜುಲೈ 1 ರಂದು ಲೋಕಾರ್ಪಣೆಗೊಳ್ಳುತ್ತಿದೆ.
ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದೂರದೃಷ್ಠಿ ಕಾರಣ : ಸದ್ಯ ಪೀಠಾಧಿಪತಿಗಳಾಗಿರುವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕನಸಿನಂತೆ ಈ ಹಾಸ್ಟೆಲ್ ಉನ್ನತೀಕರಣಗೊಳ್ಳಬೇಕು ಎಂಬ ದೂರದೃಷ್ಠಿಯ ಫಲವಾಗಿ 2 ಸಾವಿರ ವಿದ್ಯಾರ್ಥಿಗಳಿಂದ ಐದು ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಈಗ ತಲೆಎತ್ತಿ ನಿಂತಿದೆ. ಐದು ಸಾವಿರ ವಿದ್ಯಾರ್ಥಿಗಳು ಇರಬಹುದಾದ ಹಾಸ್ಟೆಲ್ ಮಾಡಬೇಕು ಎಂಬ ಶ್ರೀಗಳ ಸಂಕಲ್ಪಕ್ಕೆ ಅನೇಕ ದಾನಿಗಳು ಕೈಜೋಡಿಸಿದ ಪರಿಣಾಮವಾಗಿ ಈ ಹಿಂದೆ ಇದ್ದ ಕಟ್ಟಡ ಒಳಗೊಂಡಂತೆ ಈ ಕಟ್ಟಡವನ್ನು ವಿಸ್ತೀರ್ಣಗೊಳಿಸಲಾಗಿದ್ದು, ಮತ್ತಷ್ಟು ಆಕರ್ಷಕವಾಗಿದೆ.
ಹಾಸ್ಟೆಲ್‌ನಲ್ಲಿ ಏನೆಲ್ಲ ಸೌಲಭ್ಯಗಳಿವೆ? : ಈ ಹಾಸ್ಟೆಲ್ ಕಟ್ಟಡದಲ್ಲಿ ಒಟ್ಟು 130 ಕೊಠಡಿಗಳಿದ್ದು, ಒಂದೊಂದು ಕೊಠಡಿಯಲ್ಲಿ ಸುಮಾರು 18 ರಿಂದ 20 ವಿದ್ಯಾರ್ಥಿಗಳಿಗೆ ವಾಸ್ತವ್ಯ ಕಲ್ಪಿಸಬಹುದಾಗಿದೆ. 20 ವಿಶಾಲವಾದ ಡಾರ್ಮೆಟರಿ, ಅಡುಗೆಗೆ ಆಧುನಿಕ ಸೌಲಭ್ಯಗಳು, ತರಕಾರಿ ಕಟ್ ಮಾಡುವ ಯಂತ್ರ, ಒಂದು ಗಂಟೆಗೆ 1500 ಚಪಾತಿಗಳನ್ನು ತಯಾರಿಸುವ ಮಷಿನ್, 12 ಸ್ಟೀಮ್ ಕುಕ್ಕಿಂಗ್ ಸಿಸ್ಟಮ್ಸ್, 10 ನಿಮಿಷದಲ್ಲಿ 2 ಸಾವಿರ ಇಡ್ಲಿಗಳನ್ನು ತಯಾರಿಸುವ ಸಾಮರ್ಥ್ಯದ 4 ಸ್ಟೀಮ್ ಕುಕ್ಕಿಂಗ್ ಸಿಸ್ಟಮ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಈ ಹಾಸ್ಟೆಲ್‌ನಲ್ಲಿ ಶ್ರೀಮಠ ಕಲ್ಪಿಸಿದೆ.
ಅಕ್ಷರ ಜೋಳಿಗೆ ಎಂಬ ಹೊಸ ಪರಿಕಲ್ಪನೆ : ಸಿದ್ದಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರಸ್ವಾಮೀಜಿ ಅವರು 2007ರಲ್ಲಿ ಶ್ರೀ ಗವಿಮಠ ಆರಂಭಿಸಿದ 2 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಲೋಕಾರ್ಪಣೆ ಮಾಡಿದ್ದರು. ವಸತಿ ನಿಲಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿದ್ದರಿಂದ ಈಗ 5 ಸಾವಿರ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣವಾಗಿದೆ.
ಉಚಿತ ಪ್ರಸಾದ ನಿಲಯಕ್ಕೆ ಭಕ್ತರು ಸಹ ದಾನ ಧರ್ಮ ಮಾಡುತ್ತಿದ್ದು, ಈಗ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಅಕ್ಷರ ಜೋಳಿಗೆ ಎಂಬ ಪರಿಕಲ್ಪನೆಯಲ್ಲಿ 'ನೀಡೋಣ ತಿಂಗಳಿಗೆ ನೂರು ರೂಪಾಯಿ ಹಣ, ತೀರಿಸೋಣ ಮಾನವ ಜನ್ಮದ ಋಣʼ ಧ್ಯೇಯದೊಂದಿಗೆ ಆಟೋ ಡೆಬಿಟ್ ಮೂಲಕ ವರ್ಗಾಯಿಸುವ ವ್ಯವಸ್ಥೆಯನ್ನು ಜಾರಿ ಮಾಡಿದ್ದಾರೆ.
ಹೊಟ್ಟೆ ಹಸಿದವರಿಗೆ ಅನ್ನ, ನೆತ್ತಿ ಹಸಿದವರಿಗೆ ವಿದ್ಯೆ ಹಾಗೂ ಆಧ್ಯಾತ್ಮಿಕ ಹಸಿವು ನೀಗಿಸುವ ತ್ರಿವಿಧ ದಾಸೋಹದ ಕೇಂದ್ರವಾಗಿರುವ ಗವಿಮಠದ ಕೀರ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದರೊಂದಿಗೆ ಶ್ರೀಮಠವು ಕೂಡಾ ತನ್ನ ಸಾಮಾಜಿಕ ಜವಾಬ್ದಾರಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ದಾರಿದೀಪವಾಗಿದೆ.
ಇದನ್ನೂ ಓದಿ : ಅನ್ನ-ಅಕ್ಷರ-ಅರಿವೆಂಬ ತ್ರಿವಿಧ ದಾಸೋಹದ ಸಂಕಲ್ಪ: ರಾಜ್ಯದ 2ನೇ ಸಿದ್ಧಗಂಗೆ ಕೊಪ್ಪಳದ ಗವಿಮಠ