ಬೆಂಗಳೂರು : ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತನೆಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್‌ನಿಂದ ಸಾಲ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೊಹಮ್ಮದ್ ಜುಬೇರ್ (30) ಎಂಬಾತನನ್ನ ಬಂಧಿಸಲಾಗಿದೆ.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷನಾಗಿದ್ದ ಮೊಹಮ್ಮದ್ ಜುಬೇರ್, ಗೃಹ ಸಚಿವ ಜಿ.ಪರಮೇಶ್ವರ ಅವರ ಆಪ್ತನೆಂದು ಹೇಳಿಕೊಂಡು, ಸಾರ್ವಜನಿಕರನ್ನ ನಂಬಿಸುತ್ತಿದ್ದ. ಬಳಿಕ ಅವರಿಗೆ ಬ್ಯಾಂಕ್‌ನಲ್ಲಿ ಸಾಲ, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ. ಇದೇ ರೀತಿ ಕೆಂಗೇರಿಯ ಶಾಹಿದಾ ತಬಸ್ಸುಮ್ (55) ಎಂಬುವರಿಂದ 1.20 ಕೋಟಿ ರೂ ಹಣ ಹಾಗೂ 186 ಗ್ರಾಂ. ಚಿನ್ನ ಪಡೆದು ವಂಚಿಸಿದ್ದ. ಈ ಬಗ್ಗೆ ಶಾಹಿದಾ ತಬಸ್ಸುಮ್ ನೀಡಿದ ದೂರಿನನ್ವಯ ಮಾರ್ಚ್ ತಿಂಗಳಿನಲ್ಲಿ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರನ್ವಯ ಆರೋಪಿಯನ್ನ ಬಂಧಿಸಲಾಗಿದೆ.
ಆರೋಪಿಯು ಕೆಂಗೇರಿ ಠಾಣೆ ಸೇರಿದಂತೆ ಬೆಂಗಳೂರು ಹಾಗೂ ತುಮಕೂರಿನ ವಿವಿಧೆಡೆ ಸಾಕಷ್ಟು ಜನರಿಗೆ ವಂಚಿಸಿದ್ದು, ಆತನ ವಿರುದ್ಧ ಸುಮಾರು 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಕೆಲವೆಡೆ ದಾಖಲೆಗಳಿಗೆ ರಾಜ್ಯಪಾಲರ ಸಹಿ, ವಿವಿಧ ಇಲಾಖೆ ಅಧಿಕಾರಿಗಳ ನಕಲಿ ಮೊಹರು ಬಳಸಿ ವಂಚಿಸಿರುವುದು, ಕೆಲ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದುಕೊಂಡಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಪಿಎಸ್ಸಿ ಸದಸ್ಯತ್ವದ ಆಮಿಷ: ಸಿಎಂ, ರಾಜ್ಯಪಾಲರ ಹೆಸರಲ್ಲಿ ನಕಲಿ ಆದೇಶ ಸೃಷ್ಟಿಸಿ ₹4 ಕೋಟಿ ವಂಚನೆ - Fraud Case