ಬೆಂಗಳೂರು/ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ದೂರು ದಾಖಲಿಸಿಕೊಂಡಿರುವ ಬೆಂಗಳೂರಿನ ಬಸವೇಶ್ವರನಗರ ಠಾಣಾ ಪೊಲೀಸರು, ಹುಬ್ಬಳ್ಳಿಯಲ್ಲಿರುವ ಅವರ ಮನೆಗೆ ಕರೆತಂದು ಪರಿಶೀಲನೆ ನಡೆಸಿದರು.
ಬೆಂಗಳೂರಿನಿಂದ ಶನಿವಾರ ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಿದ ಎಸಿಪಿ ಚಂದನ್ ಕುಮಾರ್ ನೇತೃತ್ವದ ಪೊಲೀಸರ ತಂಡ, ಕೇಶ್ವಾಪುರದ ಇಂದಿರಾ ಕಾಲೋನಿಯಲ್ಲಿರುವ ಗೋಪಾಲ್ ಜೋಶಿ ಅವರ ಮನೆಯಲ್ಲಿ ಪರಿಶೀಲನೆ ನಡೆಸಿತು. ಬಳಿಕ ಗೋಪಾಲ್ ಜೋಶಿಯವರನ್ನು ಹೆಚ್ಚಿನ ವಿಚಾರಣೆಗೆ ಕೇಶ್ವಾಪುರ ಠಾಣೆಗೆ ಕರೆತರಲಾಯಿತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಗೋಪಾಲ್ ಜೋಶಿ ಅವರನ್ನು ಕೊಲ್ಲಾಪುರ ಹಾಗೂ ಪುಣೆಯಲ್ಲಿ ಅವರ ಪುತ್ರ ಅಜಯ್ ಜೋಶಿ ಅವರನ್ನು ಬಂಧಿಸಿದ್ದಾರೆ. ಇಬ್ಬರನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತಂದು ಪರಿಶೀಲನೆ ನಡೆಸಿದರು.
ಪ್ರಕರಣ ಸಂಬಂಧ ಸೋಮಶೇಖರ್ ನಾಯಕ್ ಹಾಗೂ ವಿಜಯಕುಮಾರಿ ಎಂಬುವರನ್ನ ಬಂಧಿಸಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಗೋಪಾಲ್ ಜೋಶಿ, ಮಹಾರಾಷ್ಟ್ರದ ಕೊಲ್ಲಾಪುರದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ 5.30ಕ್ಕೆ ಲಾಡ್ಜ್ಗೆ ತೆರಳಿ ಬಂಧಿಸಿ ಹುಬ್ಬಳಿಗೆ ಕರೆತರಲಾಯಿತು ಎಂಬ ಮಾಹಿತಿ ಸಿಕ್ಕಿದೆ.
ಇದೇ ವೇಳೆ ಪ್ರಕರಣದ ದೂರುದಾರರಾದ ಸುನೀತಾ ಚವ್ಹಾಣ್ ಅವರು ಕೂಡ ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಗೆ ಆಗಮಿಸಿದ್ದು, ಅವರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ನನಗೆ ಸಹೋದರಿಯೇ ಇಲ್ಲ, ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ಪ್ರಲ್ಹಾದ್ ಜೋಶಿ