ಬೆಂಗಳೂರು: ಮಣಿಪುರ ಮೂಲದ ಯುವತಿಯೊಬ್ಬಳಿಗೆ ರಸ್ತೆಯಲ್ಲಿ ಕಿರುಕುಳ ನೀಡುತ್ತಿದ್ದವರನ್ನು ಪ್ರಶ್ನಿಸಿದವನ ಮೇಲೆ ಹಲ್ಲೆ ಮಾಡಿದ ಆರೋಪದಡಿ ನಾಲ್ವರು ಅಪ್ರಾಪ್ತರನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಸಂಜೆ ಆಡುಗೋಡಿಯ ರಾಜೇಂದ್ರನಗರದಲ್ಲಿ ಈ ಘಟನೆ ನಡೆದಿದೆ. ಮನೆ ಮುಂದಿನ ರಸ್ತೆಯಲ್ಲಿ ತೆರಳುತ್ತಿದ್ದ ಮಣಿಪುರ ಮೂಲದ 25 ವರ್ಷದ ಯುವತಿಯನ್ನು ಪಾನಮತ್ತ ಆರೋಪಿಗಳ ಗುಂಪು ರೇಗಿಸಿದೆ. ಇದನ್ನು ಗಮನಿಸಿದ ಆಕೆಯ ಮನೆ ಪಕ್ಕದ ನಿವಾಸಿ ಮಾರ್ಟಿನ್ ಕುಮಾರ್ ಎಂಬಾತ ಮತ್ತು ಅವರ ಸಹೋದರ, 'ಯಾಕೆ ಆಕೆಗೆ ತೊಂದರೆ ಕೊಡುತ್ತಿದ್ದೀರಾ?' ಎಂದು ಆರೋಪಿಗಳನ್ನು ಪ್ರಶ್ನಿಸಿ ಸ್ಥಳದಿದ ಕಳುಹಿಸಿದ್ದಾರೆ. ಸ್ಥಳದಿಂದ ತೆರಳಿದ್ದ ಆರೋಪಿಗಳು ಕೆಲವೇ ಹೊತ್ತಿನಲ್ಲಿ ವಾಪಸ್ ಅದೇ ಸ್ಥಳಕ್ಕೆ ಬಂದು ಮಾರ್ಟಿನ್ ಕುಮಾರ್ ಮತ್ತು ಅವರ ಸಹೋದರ ಸ್ಟ್ಯಾಲಿನ್ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಲಾರಂಭಿಸಿದ್ದಾರೆ. ಈ ವೇಳೆ ಆರೋಪಿಗಳಲ್ಲಿ ಓರ್ವ ಚಾಕುವಿನಿಂದ ಮಾರ್ಟಿನ್ ಕುಮಾರ್ ಅವರಿಗೆ ಇರಿಯಲು ಮುಂದಾಗಿದ್ದು, ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಾರ್ಟಿನ್ ಎಡ ಮೊಣಕೈಗೆ ಗಾಯವಾಗಿದೆ. ತಕ್ಷಣ ಮಾರ್ಟಿನ್ ಸಹೋದರ ಸ್ಟಾಲಿನ್ ಹಾಗೂ ಅಕ್ಕಪಕ್ಕದವರು ರಕ್ಷಣೆಗೆ ಧಾವಿಸಿದ್ದು, ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.
ಇದನ್ನೂ ಓದಿ: ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ; 6 ಜನ ಆರೋಪಿಗಳ ಬಂಧನ
ಗಾಯಗೊಂಡವರು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಆಡುಗೋಡಿ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಾಲ್ವರು ಅಪ್ರಾಪ್ತ ಆರೋಪಿಗಳನನ್ನು ಬಂಧಿಸಿರಯವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: 12 ಅಮೃತ ಭಾರತ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಿ ಮೋದಿ
ಇಂತಹದ್ದೇ ಮತ್ತೊಂದು ಪ್ರಕರಣ: ಬುದ್ಧಿವಾದ ಹೇಳಿದ್ದಕ್ಕೆ ಗಲಾಟೆ ಆಗಿರುವ ಇಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು. ಗಲಾಟೆ ಮಾಡಬೇಡಿ, ಇತರರಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ಬುದ್ಧಿವಾದ ಹೇಳಿದ್ದಕ್ಕೆ ಹಲ್ಲೆ ನಡೆದಿತ್ತು. ಫೆ.10ರಂದು ಕೆ.ಆರ್.ಪುರಂನ ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಆನಂದಪುರದಲ್ಲಿ ಕಾರ್ತಿಕ್ ಹಾಗೂ ವಿನೀಶ್ ಎಂಬಾತನ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದಡಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಪವನ್, ವಿನಯ್ ಕುಮಾರ್, ಪ್ರಕಾಶ್, ಮನೋಜ್, ಸಂತೋಷ್ ಹಾಗೂ ದರ್ಶನ್ ಬಂಧಿತ ಆರೋಪಿಗಳಾಗಿದ್ದಾರೆ.