ಬೆಂಗಳೂರು : ಬಿಜೆಪಿ ಕರ್ನಾಟಕದ ನಾಲ್ಕು ಲೋಕಸಭಾ ಕ್ಷೇತ್ರ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯ ಹಿಂದೂ ಫೈರ್ ಬ್ರಾಂಡ್ ಹಾಲಿ ಸಂಸದ ಅನಂತ ಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದೆ. ಹೈಕಮಾಂಡ್ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಟಿಕೆಟ್ಅನ್ನು ಘೋಷಣೆ ಬಾಕಿ ಉಳಿಸಿಕೊಂಡಿದೆ.
ನಿರೀಕ್ಷೆಯಂತೆ ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡಲಾಗಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್, ರಾಯಚೂರು ಕ್ಷೇತ್ರದಿಂದ ಹಾಲಿ ಸಂಸದ ಅಮರೇಶ್ವರ ನಾಯಕ್ಗೆ ಟಿಕೆಟ್ ನೀಡಲಾಗಿದೆ.
ಶೆಟ್ಟರ್ಗೆ ಬೆಳಗಾವಿ ಟಿಕೆಟ್ : ಜಗದೀಶ್ ಶೆಟ್ಟರ್ಗೆ ನಿರೀಕ್ಷೆಯಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ, ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಆಕಾಂಕ್ಷಿಗಳಾಗಿದ್ದರು. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಗೋ ಬ್ಯಾಕ್ ಜಗದೀಶ್ ಅಭಿಯಾನವೂ ನಡೆದಿತ್ತು. ಹೊರಗಿನವರಿಗೆ ಟಿಕೆಟ್ ನೀಡದೇ ಒಳಗಿನವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಬೆಳಗಾವಿಯ ಬಿಜೆಪಿ ನಾಯಕರಾದ ಪ್ರಭಾಕರ ಕೋರೆ, ಅಭಯ ಪಾಟೀಲ, ಈರಣ್ಣ ಕಡಾಡಿ ಅವರು ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಪಂಚಮಸಾಲಿ ಸಮುದಾಯ ಹೆಚ್ಚಿರುವ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಬದಲು ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ಗೆ ಟಿಕೆಟ್ ನೀಡುವ ಬಗ್ಗೆನೂ ಒತ್ತಾಯ ಕೇಳಿಬಂದಿತ್ತು. ಅಂತಿಮವಾಗಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿಯವರ ಬೀಗರಾದ ಜಗದೀಶ್ ಶೆಟ್ಟರ್ಗೆ ಕೊನೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ. ಆದರೆ ಬೆಳಗಾವಿ ಕ್ಷೇತ್ರದಲ್ಲಿ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ನಾಯಕರ ವಿರೋಧ ಇದ್ದು, ಯಾವ ರೀತಿ ಅದನ್ನು ನಿಭಾಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಅನಂತ ಕುಮಾರ್ ಹೆಗಡೆಗೆ ಟಿಕೆಟ್ ಮಿಸ್ : ಸತತ ಆರು ಬಾರಿ ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಸಂಸದರಾಗಿದ್ದ ಸಂಸದ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಮಿಸ್ ಆಗಿದೆ. ಅನಂತ ಕುಮಾರ್ ಹೆಗಡೆ ಬದಲು ಈ ಬಾರಿ ಬಿಜೆಪಿ ಹೈಕಮಾಂಡ್ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಿದೆ.
ವಿವಾದಿತ ಹೇಳಿಕೆಗಳಿಂದ ಬಿಜೆಪಿಯನ್ನು ಮುಜುಗರಕ್ಕೊಳಮಾಡುತ್ತಿದ್ದ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ನೀಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದ್ದವು. ಸಂವಿಧಾನ ತಿದ್ದುಪಡಿಗಾಗಿ ಬಿಜೆಪಿ 400 ಸೀಟು ಗೆಲ್ಲಬೇಕಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪಕ್ಷದಲ್ಲೂ ಕೂಡಾ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ನೀಡಬೇಕಾ? ಎಂಬ ಬಗ್ಗೆ ಪಕ್ಷದಲ್ಲಿ ಗೊಂದಲ ಏರ್ಪಟ್ಟಿತ್ತು. ಕೊನೆಯದಾಗಿ ಹೈಕಮಾಂಡ್ ಕಾಗೇರಿಗೆ ಟಿಕೆಟ್ ನೀಡಿದೆ. ಹಿಂದುತ್ವದ ಫೈರ್ ಬ್ರಾಂಡ್ಗೆ ಟಿಕೆಟ್ ಮಿಸ್ ಆಗಿರುವುದು ಕ್ಷೇತ್ರದಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ಗೆ ಮಣೆ : ಇತ್ತ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್ಗೆ ಟಿಕೆಟ್ ಘೋಷಣೆ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ತೀವ್ರ ಒತ್ತಡ ಹಾಕಿದ್ದರು. ಹೈಕಮಾಂಡ್ ಬಳಿಯೂ ಎಸ್. ಆರ್ ವಿಶ್ವನಾಥ್ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದರು.
ಆದರೆ, ಹೈಕಮಾಂಡ್ ಪುತ್ರನಿಗೆ ಟಿಕೆಟ್ ನೀಡಲು ಅಸಾಧ್ಯ ಎಂಬ ಸಂದೇಶ ನೀಡಿದ ಬಳಿಕ ತಮಗೆ ಟಿಕೆಟ್ ನೀಡುವಂತೆ ವಿಶ್ವನಾಥ್ ಲಾಬಿ ನಡೆಸಿದ್ದರು. ಆದರೆ ಕೊನೆಯದಾಗಿ ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ಡಾ. ಕೆ. ಸುಧಾಕರ್ಗೆ ಟಿಕೆಟ್ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಾಸಕರಾದ ಧೀರಜ್ ಮುನಿರಾಜು ಹಾಗೂ ಎಸ್. ಆರ್ ವಿಶ್ವನಾಥ್ ಅವರು ಡಾ. ಕೆ ಸುಧಾಕರ್ಗೆ ಟಿಕೆಟ್ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದರೂ ಅವರಿಗೆ ಮಣೆ ಹಾಕಿದೆ.
ರಾಜಾ ಅಮರೇಶ್ವರ ನಾಯಕಗೆ ರಾಯಚೂರು ಟಿಕೆಟ್: ಬಿಜೆಪಿ ಹೈಕಮಾಂಡ್ ಕೊನೆಗೂ ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರು. ಆರಂಭದಲ್ಲಿ ಮಾಜಿ ಸಚಿವ ರಾಜೂಗೌಡ ಅವರನ್ನು ಬಿಜೆಪಿ ಹುರಿಯಾಳು ಮಾಡಬೇಕೆಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಈಗ ಸುರಪುರ ವಿಧಾನಸಭೆಯ ಉಪಚುನಾವಣೆಯತ್ತ ಗಮನ ಹರಿಸಿರುವುದರಿಂದ ಅವರು ಲೋಕಸಭೆಯ ಟಿಕೆಟ್ ಆಕಾಂಕ್ಷಿಯಿಂದ ಹೊರಬಿದ್ದಿದ್ದರು.
ಇದರ ಜೊತೆಗೆ ಮಾಜಿ ಸಂಸದ ಬಿ. ವಿ ನಾಯಕ, ದೇವದುರ್ಗದ ಮಾಜಿ ಸಚಿವ ಕೆ. ಶಿವನಗೌಡ ನಾಯಕ, ರಾಯಚೂರು ಗ್ರಾಮಾಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕೂಡ ಟಿಕೆಟ್ಗೆ ಲಾಬಿ ನಡೆಸಿದ್ದರು. ಅಂತಿಮವಾಗಿ ಹೈಕಮಾಂಡ್ ಹಾಲಿ ಸಂಸದರಿಗೆ ಮಣೆ ಹಾಕಿದೆ.
ಚಿತ್ರದುರ್ಗ ಟಿಕೆಟ್ ಘೋಷಣೆ ಪೆಂಡಿಂಗ್: ಬಿಜೆಪಿ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ, ಕೋಲಾರವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟು ಕೊಟ್ಟಿದೆ. ಹೀಗಾಗಿ ಬಿಜೆಪಿ ಪಾಲಿಗೆ ಉಳಿದಿದ್ದ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಟಿಕೆಟ್ನ್ನು ಇನ್ನೂ ಘೋಷಿಸಿಲ್ಲ. ಅಲ್ಲಿ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸುತ್ತಾ ಎಂಬ ಕುತೂಹಲ ಮೂಡಿಸಿದೆ. ಈಗಾಗಲೇ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೆಸರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಅವರ ಬದಲು, ಕ್ಷೇತ್ರದಲ್ಲಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತ ಎಂಬುದನ್ನು ಕಾದು ನೋಡಬೇಕು.
ಚಿತ್ರದುರ್ಗದಲ್ಲಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ, ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ಪುತ್ರ ರಘುಚಂದನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದರು. ಗೋ ಬ್ಯಾಕ್ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಸ್ಥಳೀಯರಿಗೆ ಟಿಕೆಟ್ ನೀಡಿ, ನಮಗೆ ಸ್ಥಳೀಯರು ಬೇಕು. ಹೊರಗಿನವರು ಬೇಡ ಎಂಬ ಕೂಗು ಜೋರಾಗಿದೆ. ಹೀಗಾಗಿ ಕಗ್ಗಂಟಾಗಿರುವ ಚಿತ್ರದುರ್ಗ ಕ್ಷೇತ್ರದ ಟಿಕೆಟ್ನ್ನು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ.