ಬೆಂಗಳೂರು: ರೌಡಿಶೀಟರ್ ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶನ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್, ಧನುಷ್, ಕ್ಲೆಮೆಂಟ್ ಹಾಗೂ ಸುನೀಲ್ ಬಂಧಿತ ಆರೋಪಿಗಳು. ಜನವರಿ 24ರಂದು ರಾತ್ರಿ ವಿವೇಕನಗರದ ಮಾಯಾಬಜಾರಿನ ಮನೆಯಲ್ಲಿ ಮಲಗಿದ್ದ ರೌಡಿಶೀಟರ್ ಸತೀಶ್ನನ್ನು ಐವರು ಆರೋಪಿಗಳ ತಂಡ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿತ್ತು.
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್ ಟಿ ಮಾತನಾಡಿ, "ರೌಡಿಶೀಟರ್ ಸತೀಶ್ ಕೊಲೆ ಪ್ರಕರಣದ ಬಂಧಿತರೆಲ್ಲರೂ ಸಹ 18 ರಿಂದ 20 ವರ್ಷ ವಯಸ್ಸಿನವರಾಗಿದ್ದು ಆಡುಗೋಡಿ, ಅಶೋಕನಗರ ನಿವಾಸಿಗಳಾಗಿದ್ದಾರೆ. ಹತ್ಯೆಯಾದ ಸತೀಶ್ ಆರೋಪಿಗಳಿಗೆ ಸಣ್ಣಪುಟ್ಟ ವಿಚಾರಗಳಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಹತ್ಯೆ ಆಗುವುದಕ್ಕೂ ಹಿಂದಿನ ದಿನ ಸಹ ಬಾರ್ವೊಂದರಲ್ಲಿ ಮುಖಾಮುಖಿಯಾದ ಆರೋಪಿಗಳಿಗೆ ಎಲ್ಲರ ಎದುರು ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದ. ಸತೀಶ್ನ ಉಪಟಳದಿಂದ ಬೇಸತ್ತು ಆತನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಜನವರಿ 24ರಂದು ರಾತ್ರಿ ಆತ ತನ್ನ ಮನೆಗೆ ಹೋಗುವಾಗ ಹಿಂಬಾಲಿಸಿದ್ದರು. ಮಧ್ಯರಾತ್ರಿ ಮನೆಗೆ ನುಗ್ಗಿ ಪತ್ನಿ ಪಕ್ಕದಲ್ಲಿ ಮಲಗಿದ್ದಾಗಲೇ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು" ಎಂದು ಹೇಳಿದ್ದಾರೆ.
"ಪ್ರಕರಣ ದಾಖಲಿಸಿಕೊಂಡಿದ್ದ ವಿವೇಕನಗರ ಠಾಣಾ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನ ವಿರುದ್ಧ ಈ ಹಿಂದೆ ಹತ್ಯಾ ಯತ್ನ ಪ್ರಕರಣ ಹಾಗೂ ಓರ್ವನ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿರುವುದು ತನಿಖೆಯ ವೇಳೆ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಮದ್ಯಪಾನಕ್ಕೆ ಹಣ ನೀಡದ ಮಗನಿಗೆ ಗುಂಡಿಕ್ಕಿ ಕೊಂದ ತಂದೆ(ಬೆಂಗಳೂರು): ಮತ್ತೊಂದೆಡೆ, ಮದ್ಯಪಾನ ಮಾಡಲು ಹಣ ಕೊಡಲಿಲ್ಲ ಎಂದು ತಂದೆಯೇ ಮಗನನ್ನು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಗುರುವಾರ ಸಂಜೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕರೇಕಲ್ 2ನೇ ಕ್ರಾಸ್ನಲ್ಲಿ ನಡೆದಿತ್ತು. ನರ್ತನ್ ಬೋಪಣ್ಣ (32) ಎಂಬಾತನನ್ನು ಆತನ ತಂದೆ ಸುರೇಶ್ ಕೊಲೆ ಮಾಡಿದ್ದರು. ಕೊಡಗು ಮೂಲದವರಾದ ನರ್ತನ್ ಬೋಪಣ್ಣ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ ಕರೇಕಲ್‌ನಲ್ಲಿ ಪೋಷಕರೊಂದಿಗೆ ವಾಸವಿದ್ದರು. ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೆ, ತಂದೆ ಸುರೇಶ್ ಮದ್ಯಪಾನದ ಗೀಳಿಗೆ ದಾಸರಾಗಿದ್ದರು.
ಸದಾ ಕುಡಿಯಲು ಹಣ ಬೇಕು ಎಂದು ಮಗನನ್ನು ಪೀಡಿಸುತ್ತಿದ್ದ ಸುರೇಶ್, ಗುರುವಾರ ಸಂಜೆಯೂ ಕುಡಿತಕ್ಕೆ ಹಣ ಬೇಕೆಂದು ಪೀಡಿಸುತ್ತಾ ಹೊಡೆಯಲು ಮುಂದಾಗಿದ್ದರು. ಇದೆಲ್ಲದರಿಂದ ಬೇಸತ್ತ ನರ್ತನ್ ತಂದೆಯನ್ನು ಒಂದು ಕೋಣೆಯೊಳಗೆ ತಳ್ಳಿ ಬಾಗಿಲು ಹಾಕಿದ್ದರು. ಆದರೂ ಸಹ ಕೋಣೆಯೊಳಗಿನಿಂದಲೇ ಸುರೇಶ್ ಬೆದರಿಕೆಯೊಡ್ಡಿದ್ದರು. ಸ್ವಲ್ಪ ಹೊತ್ತು ಕಳೆದ ಬಳಿಕ ಸಿಟ್ಟಿಗೆದ್ದ ಸುರೇಶ್ ತಮ್ಮ ಬಳಿ ಇದ್ದ ಲೈಸೆನ್ಸ್ ಹೊಂದಿದ ಸಿಂಗಲ್ ಬ್ಯಾರಲ್ ಗನ್‌ನಿಂದ ಬಾಗಿಲಿನತ್ತ ಗುಂಡು ಹಾರಿಸಿದ್ದ.
ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಹತ್ಯೆ: ಸ್ನೇಹಿತರಿಬ್ಬರ ಬಂಧನ