ಮಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಂದ ಗೆಳೆಯನಿಗೆ ಅಭಿನಂದಿಸಲು ಪಣಂಬೂರು ಬೀಚ್‌ಗೆ ಬಂದಿದ್ದ ವೇಳೆ ತಮ್ಮ ಮೇಲೆ ನೈತಿಕ ಪೊಲೀಸ್ಗಿರಿ ನಡೆಸಲಾಗಿದೆ ಎಂದು ಯುವತಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪಣಂಬೂರು ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪ್ರಶಾಂತ್ ಭಂಡಾರಿ (38), ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಉಮೇಶ್ ಪಿ. (23), ಪುತ್ತಿಲ ಗ್ರಾಮದ ಸುಧೀರ್ (26) ಹಾಗೂ ಮಚ್ಚಿನ ಗ್ರಾಮದ ಕೀರ್ತನ್ ಪೂಜಾರಿ (20) ಬಂಧಿತ ಆರೋಪಿಗಳು. ಫೆಬ್ರವರಿ 4ರಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 28 ವರ್ಷದ ಯುವತಿ ಕೆಲಸದ ನಿಮಿತ್ತ ಮಲ್ಪೆಗೆ ಹೋಗಲು ಮಂಗಳೂರಿಗೆ ಬಂದಿದ್ದರು. ಮಂಗಳೂರಿನಲ್ಲಿ ತನಗೆ ಪರಿಚಯವಿದ್ದ ಹುಡುಗನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ದೊರೆತಿರುವುದರಿಂದ, ಅವರನ್ನು ಅಭಿನಂದಿಸಲು, ಪಣಂಬೂರು ಬೀಚ್ನಲ್ಲಿ ಭೇಟಿಯಾಗಿದ್ದರು.
ಈ ಸಂದರ್ಭದಲ್ಲಿ ಕೆಲವು ಯುವಕರ ಗುಂಪು ಅಡ್ಡಗಟ್ಟಿ, ತಡೆದು ನಿಲ್ಲಿಸಿ ಇಬ್ಬರೂ ಜೊತೆಗೆ ಇದ್ದಿದ್ದಕ್ಕೆ ಬೈದು ಆಕ್ಷೇಪಿಸಿದ್ದಾರೆ. ಅಲ್ಲದೆ, ಕೆಲವರು ಇದನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಯುವಕರ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ತನ್ನ ಖಾಸಗಿತನಕ್ಕೆ ಧಕ್ಕೆಯಾಗದಂತೆ ಸಹಕರಿಸುವಂತೆ ಹುಡುಗಿ ದೂರು ನೀಡಿದ ಮೇರೆಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂತಹ ಘಟನೆಗಳು ಮರುಕಳಿಸದಂತೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್ ಮತ್ತು ಟ್ರೀ ಪಾರ್ಕ್ಗಳಿಗೆ ಪ್ರತಿನಿತ್ಯ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಬಳಿ ಬಂದು ರಂಪಾಟ ಆರೋಪ; ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ ಗೃಹಿಣಿ