ಬೆಂಗಳೂರು: ನಕಲಿ ಆರ್ಡರ್ ಬುಕ್ ಮಾಡಿ, ಕ್ಯಾನ್ಸಲ್ ಮಾಡುವ ಮೂಲಕ ಆನ್‌ಲೈನ್ ಲಾಜಿಸ್ಟಿಕ್ ಕಂಪನಿಗಳಿಗೆ ವಂಚಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೇಯಸ್ (29), ಕೌಶಿಕ್ (26), ರಂಗನಾಥ್ (26) ಹಾಗೂ ಆನಂದ್ ಕುಮಾರ್ (30) ಬಂಧಿತರು.
ಪೋರ್ಟರ್ ಲಾಜಿಸ್ಟಿಕ್ ಅಪ್ಲಿಕೇಷನ್‌ನಲ್ಲಿ ಗ್ರಾಹಕರು ಹಾಗೂ ಚಾಲಕರ ಹೆಸರಿನಲ್ಲಿ ತಾವೇ ನಕಲಿ ಐಡಿಗಳನ್ನು ಸೃಷ್ಟಿಸುತ್ತಿದ್ದ ಆರೋಪಿಗಳು, ದೂರದ ಸ್ಥಳಗಳಿಗೆ ಆರ್ಡರ್ ಪ್ಲೇಸ್ ಮಾಡುವ ಮೂಲಕ ಚಾಲಕನ ವ್ಯಾಲೆಟ್‌ಗೆ ಹಣ ಪಾವತಿಸುತ್ತಿದ್ದರು. ವ್ಯಾಲೆಟ್‌ಗೆ ಪಾವತಿಸಿದ ಹಣವನ್ನು ತಕ್ಷಣವೇ ಪುನಃ ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ನಂತರ Geo Spoofing ವಿಪಿಎನ್ ಬಳಸಿಕೊಂಡು ಲೊಕೇಷನ್ ಬದಲಿಸಿ ಚಾಲಕನ ಐಡಿಯಿಂದ ಆರ್ಡರ್ ಮುಕ್ತಾಯಗೊಂಡಿರುವಂತೆ ಬಿಂಬಿಸುತ್ತಿದ್ದರು.
ಮತ್ತೊಂದೆಡೆ, ಗ್ರಾಹಕರ ಐಡಿಯಿಂದ ಆರ್ಡರ್ ಕ್ಯಾನ್ಸಲ್ ಆಗಿರುವುದಾಗಿ ಬಿಂಬಿಸಿ, ರಿಫಂಡ್ ಸಹ ಪಡೆದುಕೊಳ್ಳುತ್ತಿದ್ದರು. ಇದೇ ರೀತಿ ಕಳೆದ 8 ತಿಂಗಳಿಂದ ಒಟ್ಟು 90 ಲಕ್ಷ ನಷ್ಟವಾಗಿರುವುದನ್ನು ಮನಗಂಡ ಪೋರ್ಟರ್ ಕಂಪನಿಯ ಪ್ರತಿನಿಧಿಗಳು ಆಗ್ನೆಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪೋರ್ಟರ್ ಕಂಪನಿಯೊಂದಿಗೆ ಅಟ್ಯಾಚ್ ಆಗಿರುವ ನಂಬರ್ ಮತ್ತಿತರರ ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿದ್ದುಕೊಂಡೇ Geo Spoofing ಮುಖಾಂತರ ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲೂ ಸಹ ಇದೇ ರೀತಿ PORTER ಕಂಪನಿಗೆ ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.
ಅಲ್ಲದೆ ಕೃತ್ಯಕ್ಕೆ ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಬ್ಯಾಂಕ್ ಖಾತೆಗಳನ್ನ ಬಳಸಿಕೊಂಡಿದ್ದ ಆರೋಪಿಗಳು ವಂಚಿಸಿದ ಹಣವನ್ನು ಮನೆ ನಿರ್ಮಾಣ, ವಿಲಾಸಿ ಜೀವನ ಮತ್ತು ಸಾಲ ತೀರಿಸಿಕೊಳ್ಳಲು ಬಳಸಿಕೊಂಡಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಷೇರು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ದುಪ್ಪಟ್ಟು ನೀಡುವುದಾಗಿ ಆಮಿಷ; ಬ್ಯಾಂಕ್ ನೌಕರರು ಸೇರಿ 8 ಮಂದಿ ಅರೆಸ್ಟ್