ಮಂಗಳೂರು: ಸಾಲ ತೀರಿಸಲು ಯೂಟ್ಯೂಬ್ ನೋಡಿ 500 ರೂ. ಮುಖಬೆಲೆಯ ನಕಲಿ ನೋಟು ಮುದ್ರಣ ಮಾಡಿದ ಆರೋಪಿ ಸೇರಿದಂತೆ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿಗಳಾದ ವಿ.ಪ್ರಿಯೇಶ್(38), ವಿನೋದ್ ಕುಮಾರ್ ಕೆ.(33), ಅಬ್ದುಲ್ ಖಾದರ್ ಎಸ್.ಎ(58) ಮತ್ತು ಕಡಬದ ಆಯೂಬ್ ಖಾನ್ (51) ಬಂಧಿತರು.
ಕೇರಳ ರಾಜ್ಯದಲ್ಲಿ ಖೋಟಾನೋಟು ಮುದ್ರಿಸಿ ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಬಂದಿದ್ದ ವೇಳೆ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ 500 ರೂ. ಮುಖಬೆಲೆಯ 427 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದರು. ಬಳಿಕ ಈ ಖೋಟಾ ನೋಟುಗಳನ್ನು ಮಂಗಳೂರು ನಗರದ ಕ್ಲಾಕ್‌ಟವರ್ ಬಳಿಯ ಲಾಡ್ಜ್‌ವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂ. ಮುಖಬೆಲೆಯ ಖೋಟಾನೋಟು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾನೋಟುಗಳು, 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಪ್ರಿಯೇಶ್, ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾನೆ. ಈ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾ ನೋಟುಗಳನ್ನು ತಯಾರಿಸಲಾಗುತ್ತಿತ್ತು. ಖೋಟಾನೋಟು ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸಲಾಗುತ್ತಿತ್ತು. ಈತ ಸಾಲ ತೀರಿಸಲು ನಕಲಿ ನೋಟು ಮುದ್ರಣಕ್ಕೆ ನಿರ್ಧರಿಸಿದ್ದ.
ಈತನಿಗೆ ಪ್ರಿಂಟಿಂಗ್ ಉದ್ಯಮದಲ್ಲಿ 20 ವರ್ಷದ ಅನುಭವವಿದೆ. ಖೋಟಾನೋಟು ತಯಾರಿಕಾ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣ ಸಂಪಾದನೆ ಮಾಡುವ ದಂಧೆಗೆ ಇಳಿದಿದ್ದ. ಆರೋಪಿ ಮುದ್ರಿಸಿದ ನೋಟನ್ನು ಶೇ.25 ಕಮೀಷನ್ಗೆ ನೀಡುವ ಭರವಸೆ ನೀಡಿ ಉಳಿದ ಮೂವರನ್ನು ಕರೆಸಿದ್ದ. ಇವರು ಆರೋಪಿಯಿಂದ ನಕಲಿ ನೋಟು ಖರೀದಿಸಲು ಬಂದಾಗ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವಾರು ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.