ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ನಡೆದ 48 ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಗರಗ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಕಂಡೊಬಾ ಪಟದಾರಿ (26), ಆಕಾಶ ಮಾದಪ್ಪನವರ (19), ಪ್ರಜ್ವಲ ವಡ್ಡರ (19) ಹಾಗೂ ಮಂಜುನಾಥ ಚಿಕ್ಕೊಪ್ಪ (20) ಎಂಬವರನ್ನು ಬಂಧಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಗಿರೀಶ ಕರಡಿಗುಡ್ಡ (49) ಎಂಬವರನ್ನು ಮನೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿತರು ತಲೆಮರೆಸಿಕೊಂಡಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಆರಂಭದಲ್ಲಿ ಕೊಲೆ ಮಾಡಿದವರ ಸುಳಿವು ಪತ್ತೆ ಸಿಕ್ಕಿರಲಿಲ್ಲ. ಹೀಗಾಗಿ ಕೌಟುಂಬಿಕ ಕಲಹದಿಂದ ಕೊಲೆ ನಡೆದಿರುವ ಶಂಕೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಮದುವೆ ಮಾಡಲೊಪ್ಪದ ಯುವತಿಯ ತಾಯಿ, ತಮ್ಮನನ್ನು ಭೀಕರವಾಗಿ ಕೊಲೆಗೈದ ಯುವಕ
ಕೊಲೆ ಆರೋಪಿಗಳಿಗೆ ಹಾಗೂ ಮೃತ ಗಿರೀಶ ಅವರ ನಡುವೆ ಜಗಳ ನಡೆದಿತ್ತು. ಅದೇ ವೈಷಮ್ಯ ಬೆಳೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ನಾಲ್ವರು ಆರೋಪಿಗಳೂ ಗರಗ ಗ್ರಾಮದ ನಿವಾಸಿಗಳಾಗಿದ್ದಾರೆ. ಮೊದಲಿಗೆ ಪ್ರಮುಖ ಆರೋಪಿ ಕಂಡೊಬಾ ಹಾಗೂ ಗಿರೀಶ ಮಧ್ಯೆ ಜಗಳ ನಡೆದಿತ್ತು. ಬಳಿಕ ಉಳಿದ ಆರೋಪಿತರೊಂದಿಗೂ ಸಹ ಮೃತ ಗಿರೀಶ ಜಗಳ ಮಾಡಿಕೊಂಡಿದ್ದ. ಹೀಗಾಗಿ, ನಾಲ್ವರೂ ಸೇರಿಕೊಂಡು ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದಾರೆ. ನಾಲ್ವರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಧಾರವಾಡ: ಮನೆಗೆ ಬಂದು ವ್ಯಕ್ತಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು: ಆರೋಪಿಗಳಿಗಾಗಿ ತಲಾಶ್