ಬೆಂಗಳೂರು: ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಅಪಾರ್ಟ್ಮೆಂಟ್ಗೆ ನುಗ್ಗಿ ಗಾಂಜಾ ಗಿಡ ಬೆಳೆಯುತ್ತಿರುವುದಾಗಿ ವಿಡಿಯೋ ಮಾಡಿ ವಿದ್ಯಾರ್ಥಿಗಳನ್ನ ಬೆದರಿಸಿದ್ದಲ್ಲದೇ, ಅವರ ಮೇಲೆ ಹಲ್ಲೆ ಮಾಡಿ 90 ಸಾವಿರ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಕೇರಳ ಮೂಲದ ನಾಲ್ವರು ಸುಲಿಗೆಕೋರರನ್ನ ಸೋಲದೇವನಹಳ್ಳಿ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಕೇರಳದ ತಿರುವನಂತಪುರಂ ಮೂಲದ ಪ್ರಮೋದ್, ಅನಂತಕೃಷ್ಣ, ಆದರ್ಶ ಹಾಗೂ ದೀಪಕ್ ಬಂಧಿತರು. ಇವರಿಂದ ಎರಡು ಕಾರು, ಒಂದು ಏರ್ ಪಿಸ್ತೂಲ್, ಕೈಕೋಳ, ಪೊಲೀಸ್ ಲಾಠಿ, ನಕಲಿ ಸಿಬಿಐ ಹೆಸರಿನ ಮೂರು ಗುರುತಿನ ಚೀಟಿ ಹಾಗೂ ನಾಲ್ಕು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತರನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿದ್ದೇನು?: 'ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್ನ ಮಹಾವೀರ್ ಅಪಾರ್ಟ್ಮೆಂಟ್ನ ಪ್ಲ್ಯಾಟ್ನಲ್ಲಿ ಕೇರಳದ ಮೂಲದ ನಾಲ್ಕಾರು ವಿದ್ಯಾರ್ಥಿಗಳು ವಾಸವಾಗಿದ್ದರು. ಆಚಾರ್ಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳು ಸಹ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಮೇ 26ರಂದು ಆರೋಪಿ ಪ್ರಮೋದ್ ಬೆಂಗಳೂರಿಗೆ ಬಂದಿದ್ದ. ಸಹಚರರನ್ನ ಒಗ್ಗೂಡಿಸಿಕೊಂಡು ಕೇರಳದ ವಿದ್ಯಾರ್ಥಿಗಳು ವಾಸವಾಗಿರುವ ಮನೆಗಳನ್ನ ಶೋಧಿಸಿದ್ದ. ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿರುವ ಕೇರಳದ ಮೂಲದ ವಿದ್ಯಾರ್ಥಿಗಳನ್ನ ಗುರಿಯಾಗಿಸಿಕೊಂಡು ಮೇ 27ರಂದು ರಾತ್ರಿ ಸಿಬಿಐ ಹೆಸರಿನಲ್ಲಿ ಮನೆಗೆ ನುಗ್ಗಿದ್ದರು. ಗಾಂಜಾ ಗಿಡವನ್ನ ಯುವಕರಿಗೆ ಕೊಟ್ಟು ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು. ಅಲ್ಲದೇ ಲಾಠಿಯಿಂದ ಹಲ್ಲೆ ಮಾಡಿದ್ದರು. 3 ಲಕ್ಷ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ಯುವಕರಿಂದ ಆನ್ಲೈನ್ ಮೂಲಕ 90 ಸಾವಿರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ. ಇನ್ನುಳಿದ ಹಣವನ್ನ ನಾಳೆ ಸಂಜೆಯೊಳಗೆ ನೀಡಬೇಕು. ಈ ಬಗ್ಗೆ ಪೊಲೀಸರಿಗೆ ದೂರು ನೀಡಬಾರದೆಂದು ಬೆದರಿಸಿ ಎಸ್ಕೇಪ್ ಆಗಿದ್ದರು. ಮೇ 28ರಂದು ಫೋನ್ ಕರೆ ಮಾಡಿ ಹಣ ನೀಡುವಂತೆ ಯುವಕರಿಗೆ ಆರೋಪಿಗಳು ಒತ್ತಡ ಹೇರಿದ್ದರು. ಈ ಸಂಬಂಧ ಯುವಕರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನ ತಮಿಳುನಾಡಿನ ಧರ್ಮಪುರಿಯಲ್ಲಿ ಬಂಧಿಸಲಾಗಿದೆ' ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಹಾಗೂ ನನ್ನ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ: ಡಿಸಿಎಂ ಡಿಕೆಶಿ ಆರೋಪ - Shatru Bhairavi Yaga