ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ 16 ಎಕರೆ ಭೂಮಿ ಕಬಳಿಸಲು ಭೂಮಾಲೀಕರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದಡಿ ಮಾಜಿ ರೌಡಿ, ಮಾಗಡಿ ತಾಲೂಕಿನ ಕಾಂಗ್ರೆಸ್ ಮುಖಂಡ ಸೇರಿ ಇಬ್ಬರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿನಗರದ ಎಚ್.ಎಂ.ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಈತನ ಸಹಚರ ಗೋವಿಂದರಾಜು ಬಂಧಿತರು.
ಮಾಗಡಿ ರಸ್ತೆ ಹೇರೋಹಳ್ಳಿಯ ಸಮೀಪ ಸ್ಥಳೀಯ ನಿವಾಸಿ ಶಂಕರಣ್ಣ ಎಂಬವರಿಗೆ ಸೇರಿದ ಹದಿನಾರು ಎಕರೆ ಭೂಮಿಯನ್ನು ಕಬಳಿಸಲು ಜೇಡರಹಳ್ಳಿ ಕೃಷ್ಣಪ್ಪ ಯತ್ನಿಸಿದ್ದ. ಈ ಸಂಬಂಧ ಶಂಕರಣ್ಣ ನೀಡಿದ ದೂರಿನ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಸಹಚರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಿತ್ರಾರ್ಜಿತವಾಗಿ ಶಂಕರಣ್ಣಗೆ ಬಂದಿದ್ದ ಭೂಮಿ ಮೇಲೆ ಜೇಡರಹಳ್ಳಿ ಕೃಷ್ಣಪ್ಪನ ಕಣ್ಣು ಬಿದ್ದಿದೆ. ಕಡಿಮೆ ಬೆಲೆಗೆ ಭೂಮಿ ಖರೀದಿಗೆ ಜೇಡರಹಳ್ಳಿ ಯತ್ನಿಸಿದ್ದ. ಮಾರಾಟ ಮಾಡಲು ಶಂಕರಣ್ಣ ನಿರಾಕರಿಸಿದ್ದರು. ಇತ್ತೀಚೆಗೆ ಶಂಕರಪ್ಪ ಕುಟುಂಬ ಸದಸ್ಯರು ಬಡಾವಣೆ ಮಾಡಲು ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದರು. ಇದನ್ನು ಗಮನಿಸಿದ ಜೇಡರಹಳ್ಳಿ ಸಹಚರರು ಸ್ಥಳಕ್ಕೆ ಬಂದು ಶಂಕರಪ್ಪ ಕುಟುಂಬ ಸದಸ್ಯರಿಗೆ ಬೆದರಿಕೆ ಒಡ್ಡಿದ್ದರು.
ಜನವರಿಯಲ್ಲಿ ನಾಗರಬಾವಿ ಉಪ ನೋಂದಣಿ ಕಚೇರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಭೂಮಿಯನ್ನು ಕ್ರಯಪತ್ರ ಮಾಡಿಸಿಕೊಂಡಿದ್ದರು. ಇದನ್ನು ತೋರಿಸಿ ಭೂಮಿ ಕಬಳಿಸಲು ಜೇಡರಹಳ್ಳಿ ಗ್ಯಾಂಗ್ ಪ್ರಯತ್ನಿಸಿತ್ತು. ನೊಂದ ಶಂಕರಪ್ಪ, ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿ ರಕ್ಷಣೆ ಕೋರಿದ್ದರು. ಡಿಸಿಪಿ ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಗೆ ಸಂತ್ರಸ್ತ ದೂರು ಸಲ್ಲಿಸಿದ್ದರು. ಇದರನ್ವಯ ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಆತನ ಸಹಚರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಕಚೇರಿಗಳಿಗೆ ಹೆಚ್ಚುವರಿ ಸ್ಥಳಾವಕಾಶ: 10 ಮಹಡಿಗಳ ಕಟ್ಟಡ ನಿರ್ಮಾಣ ಪ್ರಸ್ತಾವ ಅಂತಿಮ