ತುಮಕೂರು : ಒಕ್ಕಲಿಗ ಸಮುದಾಯ ಈ ಚುನಾವಣೆಯಲ್ಲಿ ನನ್ನೊಂದಿಗೆ ಇರಲಿದ್ದು, ನನ್ನ ಕೈ ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಪ್ರಮಖರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆಯೂ ಬಿಜೆಪಿಯೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಕಾರ್ಯಕರ್ತರು ವಿ. ಸೋಮಣ್ಣ ಅವರ ಗೆಲುವಿಗೆ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಮೈಸೂರಿನಲ್ಲಿ ಸೀಟು ಬೇಕು ಅಂತ ಸಿದ್ದರಾಮಯ್ಯ ಮೂಲಕ ನನ್ನನ್ನು ನಿಲ್ಲುವಂತೆ ಮಾಡಿ ಮುದ್ದಹನುಮೇಗೌಡರನ್ನು ಬಲಿ ಹಾಕಿದರು ಎಂದು ಸ್ಮರಿಸಿದರು. ಇದೊಂದು ಚುನಾವಣೆಯಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಬೇಕು. ಸಿದ್ದರಾಮಯ್ಯ ಮಾಡಿದ ಹಲವು ತಪ್ಪುಗಳಿಂದಾಗಿ ಪಕ್ಷವು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದೆ. ಕಾಲ ಸಮೀಪಿಸುತ್ತಿದೆ. 7ನೇ ತಾರೀಖಿನವರೆಗೂ ನಾನು ಎಲ್ಲಾ ಕ್ಷೇತ್ರಗಳಿಗೂ ಹೋಗಿ ಪ್ರಚಾರ ಮಾಡಲಿದ್ದೇನೆ ಎಂದು ಹೇಳಿದರು.
ತುಮಕೂರು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಮಾತನಾಡಿ, ನಾನು ಚುನಾವಣೆಗೆ ಸ್ಪರ್ಧಿಸಲು ದೇವೇಗೌಡರೇ ಮೂಲ ಕಾರಣ. ತುಮಕೂರಿಗೆ ಬಂದು ಕೆಲಸ ಮಾಡಲು ಸರ್ವ ರೀತಿಯಲ್ಲೂ ದೇವೇಗೌಡರ ಆಶೀರ್ವಾದವೇ ಪ್ರಮುಖವಾಗಿದೆ ಎಂದು ಹೇಳಿದರು. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಮೋದಿಯಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿದರು. ದೇವೇಗೌಡರು ಏನು ಸೂಚನೆ ನೀಡುತ್ತಾರೋ ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ದೇವೇಗೌಡರು ಪ್ರಮುಖ ಕಾರಣರಾಗಿದ್ದಾರೆ. ಅಲ್ಲದೆ ಅವರ ಕೊಡುಗೆ ಅಪಾರವಾಗಿದೆ.
ಹಾಸನ, ಮಂಡ್ಯ, ತುಮಕೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಇರುವ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ದೇವೇಗೌಡರು ಪಣತೊಟ್ಟಿರುವಂತೆ ತುಮಕೂರಿನಲ್ಲಿಯೂ ಕೂಡ ಅವರು ಸಕ್ರಿಯವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ : ಜನರ ಒತ್ತಾಯದ ಮೇರೆಗೆ ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ: ಹೆಚ್.ಡಿ ದೇವೇಗೌಡ - HD Devegowda