ಬೆಂಗಳೂರು: ಸಿ. ಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಯಾರೂ ಬರಬಹುದು ಎಂದು ಮಾಜಿ ಸಂಸದ ಡಿ. ಕೆ ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ಕಾಂಗ್ರೆಸ್ ಸೇರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಯೋಗೇಶ್ವರ್ ಅವರು ಪರಿಷತ್ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದು ಅದು ಅಂಗೀಕಾರವಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಚನ್ನಪಟ್ಟಣದಲ್ಲಿ ಇಂದು ಸಭೆ ಮಾಡುತ್ತಿರುವುದು ಗೊತ್ತಿದೆ. ಇದರ ಹೊರತಾಗಿ ಅವರು ಕಾಂಗ್ರೆಸ್ ಸೇರುವ ಕುರಿತು ಯಾವುದೇ ವಿಚಾರ ಗೊತ್ತಿಲ್ಲ ಎಂದು ತಿಳಿಸಿದರು.
ಎಲ್ಲರಿಗೂ ಸ್ವಾಗತ: ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸುರೇಶ್ ಅವರು ಸ್ವಾಗತಿಸುತ್ತಾರಾ? ಎಂಬ ಪ್ರಶ್ನೆಗೆ, ಚನ್ನಪಟ್ಟಣದಲ್ಲಿ ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಹಾಗೂ ಬಿಜೆಪಿಯಿಂದ ಬರುವ ಎಲ್ಲಾ ಮುಖಂಡರನ್ನು ನಾವು ಸ್ವಾಗತಿಸಿದ್ದೇವೆ. ಪಕ್ಷದ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿ ಬರುವವರಿಗೆ ಸ್ವಾಗತವಿದೆ. ಯೋಗೇಶ್ವರ್ ಅಥವಾ ಮತ್ತೊಬ್ಬರು ಎಂದು ಪ್ರತ್ಯೇಕಿಸಿ ಹೇಳುವುದಿಲ್ಲ. ಯೋಗೇಶ್ವರ್ ಅವರ ಪಕ್ಷ ಸೇರ್ಪಡೆ ವಿಚಾರ ನನ್ನ ಮುಂದೆ ಇಲ್ಲ. ಅವರು ಹಿರಿಯ ನಾಯಕರು, ಮಾಜಿ ಸಚಿವರು, ಸಾಕಷ್ಟು ಅನುಭವ ಇರುವವರು. ಅವರ ಎನ್ಡಿಎ ಮೈತ್ರಿ ಗಟ್ಟಿಯಾಗಿದ್ದು, ಅವರು ಯಾವ ತೀರ್ಮಾನ ಮಾಡುತ್ತಾರೆ, ಕಾದು ನೋಡೋಣ ಎಂದು ತಿಳಿಸಿದರು.
ಗುರುವಾರ ಯೋಗೇಶ್ವರ್ ಅವರು ಸೇರ್ಪಡೆಯಾಗಲಿದ್ದಾರೆ ಎಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚನ್ನಪಟ್ಟಣದ ಕಾರ್ಯಕರ್ತರು ನನಗೆ ಕರೆ ಮಾಡಿ ಯೋಗೇಶ್ವರ್ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಸಭೆಯ ವಾಸ್ತವಾಂಶ ಏನು ಎಂದು ಸಂಜೆಯ ಒಳಗಾಗಿ ತಿಳಿಯಲಿದೆ ಎಂದು ತಿಳಿಸಿದರು.
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ: ತಮ್ಮ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಮುಕ್ತವಾದ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಅವರು ತೀರ್ಮಾನ ಮಾಡಿದ ನಂತರ ನಾನು ತೀರ್ಮಾನ ಮಾಡುತ್ತೇನೆ. ಪಕ್ಷದ ಆದೇಶವನ್ನು ನಾನು ಪಾಲಿಸಬೇಕು, ನಮ್ಮ ಮುಖಂಡರೂ ಪಾಲಿಸಬೇಕು. ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ನಮ್ಮ ಪಕ್ಷದ ಮುಂದಿನ ನಡೆ ಹೇಗಿರಬೇಕು ಎಂದು ಜಿಲ್ಲೆಯ ಶಾಸಕರು ಹಾಗೂ ಮುಖಂಡರ ಜತೆ ನಾವು ಚರ್ಚೆ ಮಾಡಿದ್ದು, ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದ್ದು, ಪಕ್ಷದಿಂದಲೇ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಿ. ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ: ಸಿ. ಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವ ಬಗ್ಗೆ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆ ಎಂಬ ಚರ್ಚೆ ಇದೆ. ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೂಡ ಕೊಟ್ಟಿದ್ದಾರೆ. ವೈಯಕ್ತಿಕವಾಗಿ ಯೋಗೇಶ್ವರ್ ಒಳ್ಳೆ ಸ್ನೇಹಿತರು. ಹಿಂದೆ ಕಾಂಗ್ರೆಸ್‌ನಲ್ಲಿ ಇದ್ರು. ಆಗ ಒಳ್ಳೆಯ ಕೆಲಸಗಳನ್ನು ಸಹ ಮಾಡಿದ್ದರು ಎಂದರು.
ಮಾಜಿ ಸಂಸದ ಡಿ. ಕೆ ಸುರೇಶ್ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾವು ನಿಲ್ಲಿ ಅಂತ ಹೇಳ್ತಿದ್ದೇವೆ. ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ಹೇಳಿದರು.
160 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ : ಜಾತಿ ಗಣತಿ ಜಾರಿ ವಿಚಾರವಾಗಿ ಮಾತನಾಡಿ, ಸಚಿವ ಸಂಪುಟ ಮುಂದೆ ಇಡ್ತೇವೆ. ಈ ಬಗ್ಗೆ ಸಿಎಂ ಕೂಡ ಹೇಳಿದ್ದಾರೆ. ಅದರ ಸಾಧಕ - ಭಾದಕ ಚರ್ಚೆ ಮಾಡ್ತೇವೆ. ನಂತರ ಮುಂದಿನ ತೀರ್ಮಾನ ತೆಗೆದುಕೊಳ್ತೇವೆ. ಮೊದಲು ಚರ್ಚೆ ಮಾಡ್ತೇವೆ. 160 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ವರದಿಯನ್ನು ಜನರ ಮುಂದೆ ಇಡದೆ ಹೋದರೆ ಹೇಗೆ?. ಅಷ್ಟೊಂದು ಹಣ ವ್ಯಯ ಆಗಲಿದೆ. ವರದಿಯಲ್ಲಿ ಏನಿದೆ ಅನ್ನೋದು ನೋಡಬೇಕಲ್ವಾ? ಎಂದು ಪ್ರಶ್ನಿಸಿದರು.
ಇಲ್ಲದಿದ್ರೆ ನೀವೇ ಮುಚ್ಚಿ ಹಾಕಿದ್ರಿ ಅಂತೀರಿ. ಜನರ ಮುಂದೆ ವರದಿಯನ್ನು ಇಡ್ತೇವೆ. ವರದಿ ಜಾರಿಯಾಗುವ ವಿಚಾರ ಬೇರೆ, ಆದ್ರೆ ವರದಿಯಲ್ಲಿ ಏನಿದೆ ಅಂತಾ ನೋಡ್ಬೇಕು. ತೀರ್ಮಾನಗಳು ಬೇರೆ ಬೇರೆ ರೀತಿಯಲ್ಲಿ ಆಗೋದು. ಅದು ಬಿಟ್ಟರೆ ಆತಂಕ ಪಡೋದು ಏನಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಸಂಜೆವೆರೆಗೂ ಕಾದು ನೋಡಿ ಮುಂದಿನ ತೀರ್ಮಾನ: ಸಿಪಿ ಯೋಗೇಶ್ವರ್