ಬೆಂಗಳೂರು: ಯತ್ನಾಳ್ಗೂ ಕೂಡ ಡಿ.ಕೆ.ಶಿವಕುಮಾರ್ ಜೊತೆ ಬಾಂಧವ್ಯವಿದೆ. ಅವರು ಕೂಡಾ ಆಗಾಗ ಡಿ.ಕೆ.ಶಿವಕುಮಾರ್ ಜೊತೆ ಕುಶಲೋಪರಿ ಮಾತನಾಡುತ್ತಿರುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಇಂದು ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಬಿಜೆಪಿ, ಆರ್.ಅಶೋಕ್ ಹೋರಾಟದ ವಿಚಾರವಾಗಿ ಮಾತನಾಡುತ್ತಾ, ಬಿಜೆಪಿಯವರು ಯತ್ನಾಳ್ ವಿರುದ್ಧ ಹೋರಾಟ ಮಾಡ್ತಾರೋ? ಇಲ್ಲ ನಮ್ಮ ವಿರುದ್ಧ ಹೋರಾಟ ಮಾಡ್ತಾರೋ?. ನಾವು ನಮ್ಮ ಸರ್ಕಾರವಿದೆ. ಅಭಿವೃದ್ಧಿ ಕೆಲಸ ಮಾಡಿ ಅಂತ ಹೇಳಿದ್ದೇವೆ ಎಂದು ತಿಳಿಸಿದರು.
ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೂ ಕೂಡ ಸ್ವಾಮೀಜಿ ಮೇಲೆ ದ್ವೇಷದ ರಾಜಕಾರಣ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ. ಈಗಾಗಲೇ ಪರಮಪೂಜ್ಯ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದರು.
ಭಾರತದಲ್ಲಿ ನಾವೆಲ್ಲರೂ ಕೂಡಾ ಸಂವಿಧಾನದ ಕೆಳಗಡೆ ಇರುವಂಥವರು. ಸಂವಿಧಾನದಲ್ಲಿ ಭಾರತದ ಪ್ರಜೆಯಾಗಿ ಪ್ರತಿಯೊಬ್ಬರಿಗೂ ಕೂಡಾ ಎಲ್ಲ ರೀತಿಯ ಹಕ್ಕುಗಳನ್ನು ಕೊಟ್ಟಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ಕೂಡಾ ಕೊಟ್ಟಿದ್ದಾರೆ. ಪರಮಪೂಜ್ಯರು ಈಗಾಗಲೇ ಸ್ಪಷ್ಟಪಡಿಸಿದ್ದು, ನಾನು ಆಡಿರುವಂತಹ ಮಾತು ಸಾಂದರ್ಭಿಕವಾಗಿ ತಪ್ಪಾಗಿರಬಹುದು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಸರ್ಕಾರ ದೂರು ದಾಖಲಿಸಿಕೊಂಡಿದೆ. ಸ್ವಾಮೀಜಿಯವರು ಸ್ವತಃ ತಮ್ಮ ಹೇಳಿಕೆಯನ್ನು ಹಿಂಪಡೆದಿರುವುದರಿಂದ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯ ಮಾಡಲು ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ವಿಚಾರವಾಗಿ ಮಾತನಾಡಿ, ಎಲ್ಲರೂ ಸೇರಿಯೇ ಸಮಾವೇಶ ಮಾಡ್ತಿದ್ದಾರೆ. ಪಕ್ಷ ಮೊದಲು ಅಂತ ಅವರಿಗೆ ಅರ್ಥವಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಕಾಮಾಕ್ಯ ಟೆಂಪಲ್ ಭೇಟಿ ವಿಚಾರವಾಗಿ ಮಾತನಾಡಿ, ಜನರನ್ನು ದೇವರು ಎಂದು ನಂಬಿದ್ದೆ. ಜನರು ನನ್ನನ್ನು ನಂಬಲಿಲ್ಲ. ಅದಕ್ಕೆ ದೇವರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇಗುಲಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ, ಕೆಪಿಸಿಸಿ ಹುದ್ದೆ ಖಾಲಿ ಇಲ್ಲ. ನಾನು ರೆಸ್ಟ್ನಲ್ಲಿ ಇದ್ದೇನೆ. ನಾನು ಆಸೆ ಪಡಲ್ಲ, ದುರಾಸೆ ಪಡಲ್ಲ. ಯಾವುದೂ ನಮ್ಮ ಸ್ವಂತ ಸ್ವತ್ತಲ್ಲ ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ಬಿಡ್ತೇನೆಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಕೆ.ಎನ್.ರಾಜಣ್ಣ ಸರ್ವ ಪಕ್ಷದ ನಾಯಕರು. ದಳ ಬಿಜೆಪಿ ಜೊತೆ ಸಖ್ಯ ಇದೆ. ಧಾರಾಳವಾಗಿ ಅವರಿಗೆ ಕೊಡಲಿ. ನಾವೆಲ್ಲರೂ ಅವರ ಪರ ಕೆಲಸ ಮಾಡ್ತೇವೆ ಎಂದರು.
ಚನ್ನಪಟ್ಟಣ ಕೃತಜ್ಞತಾ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಡಿಸೆಂಬರ್ 14ರಂದು ಮಾಡೋಕೆ ನಿರ್ಧರಿಸಲಾಗಿದೆ. ಕೆಲವು ಶಾಸಕರು ಅಧಿವೇಶನ ಇದೆ ಅಂತಿದ್ದಾರೆ. ಸಮಯ ಸಿಗ್ತಿಲ್ಲ, ಮತ್ತೊಮ್ಮೆ ಹೇಳ್ತೇವೆ ಎಂದು ತಿಳಿಸಿದರು.
ರಾಮನಗರ ಕ್ಲೀನ್ ಸ್ವೀಪ್ ಮಾಡುವ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿ, ಒಳ್ಳೆಯ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಅವರು ಮಾಡಲಿ ಸಂತೋಷ. ಜಿಲ್ಲೆಯ ಕೈ ನಾಯಕರು ಜನರ ಕೆಲಸ ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಯತ್ನಾಳ್ ತಂಡದಿಂದ ವಕ್ಫ್ ಜನಜಾಗೃತಿ ಸಮಾವೇಶ; ವಿಜಯೇಂದ್ರ ವಿರುದ್ಧ ಗುಡುಗು