ಬೆಂಗಳೂರು : ಆರ್. ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಅಕ್ರಮವಾಗಿ ವೋಟರ್ ಐಡಿ ಸಂಗ್ರಹ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದ್ದರೂ, ವಿಳಂಬ ಧೋರಣೆ ತೋರಿ ನ್ಯಾಯಯುತವಾಗಿ ತನಿಖೆ ನಡೆಸಿಲ್ಲ ಎಂದು ಬಿಜೆಪಿ ಮಾಜಿ ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜ್ ಆರೋಪಿಸಿದ್ದು, ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
2018ರ ವಿಧಾನಸಭಾ ಚುನಾವಣೆ ವೇಳೆ ಜಾಲಹಳ್ಳಿಯ ಮನೆಯೊಂದರಲ್ಲಿ ನೂರಾರು ವೋಟರ್ ಐಡಿ ಪತ್ತೆಯಾಗಿದ್ದವು. ಈ ಸಂಬಂಧ ರಾಕೇಶ್ ಎಂಬುವರು ನೀಡಿದ ದೂರನ್ನು ಆಧರಿಸಿ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಮುನಿರತ್ನ ಅವರ ಹೆಸರು ಬಿಡಲಾಗಿತ್ತು. ಅಲ್ಲದೆ, ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿಲ್ಲ. ಮೂರೂವರೆ ವರ್ಷಗಳ ಹಿಂದೆ ಐಪಿಎಸ್ ಅಧಿಕಾರಿ ಮಟ್ಟದಲ್ಲಿ ತನಿಖೆ ನಡೆಸುವಂತೆ ತೀರ್ಪು ನೀಡಿದ್ದರೂ ಸಮಗ್ರವಾಗಿ ತನಿಖೆ ನಡೆಸಿಲ್ಲ ಎಂದು ದೂರಿನಲ್ಲಿ ಮುನಿರಾಜು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತುಳಸಿ ಮುನಿರಾಜು ಪರ ವಕೀಲ ಧರಣೇಶ್, '2018ರ ಚುನಾವಣೆಯ ವೇಳೆ ಸಿಕ್ಕಂತಹ ನಕಲಿ ವೋಟರ್ ಐಡಿ ಪ್ರಕರಣ ಸಂಬಂಧ ಈವರೆಗೆ ಪ್ರಕರಣದ ತನಿಖೆ ಸರಿಯಾಗಿ ಮಾಡಿಲ್ಲ. ನ್ಯಾಯಾಲಯ ತೀರ್ಪು ನೀಡಿದ್ದರೂ ಕೂಡ ತನಿಖೆ ಮಾಡಿಲ್ಲ. ಪ್ರತ್ಯಕ್ಷ ಸಾಕ್ಷಿ ಮುನಿರಾಜು ಸೇರಿದಂತೆ ಇನ್ನಿತರರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಆರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇನೆ. ದೂರುದಾರ ರಾಕೇಶ್ನನ್ನ ಬೆದರಿಸಿ ಜೊತೆಗೆ ಸೇರಿಸಿಕೊಂಡು ದೂರು ವಾಪಸ್ ತೆಗೆಸಿಕೊಂಡಿದ್ದಾರೆ. ಪ್ರಕರಣ ಸಮಗ್ರ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ನೇಮಿಸಿತ್ತು. ಆದರೆ ಇದುವರೆಗೂ ತನಿಖೆ ಸರಿಯಾಗಿ ನಡೆದಿಲ್ಲ' ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಅತ್ಯಾಚಾರ ಆರೋಪ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು