ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಗಂಭೀರವಾಗಿ ಕೆಲಸ ಮಾಡುವುದು ಒಳ್ಳೆಯದು. ಹುಡುಗಾಟದ ಬುದ್ಧಿ, ವಯಸ್ಸು ಸಣ್ಣದಿರೋದ್ರಿಂದ ಆ ಸ್ಥಾನಕ್ಕೆ ಅವರು ಲಾಯಕ್ಕಲ್ಲ. ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲಿ ಎಂದು ಮೊನ್ನೆ ದೆಹಲಿಯಲ್ಲೂ ನಾನು ಹೇಳಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ವಾಗ್ದಾಳಿ ನಡೆಸಿದರು.
ದೆಹಲಿ ಪ್ರವಾಸ ಮುಗಿಸಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇಂದು ಸಂಜೆ ಬಂದಿಳಿದ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ಜಂಟಿ ಸದನ ಸಮಿತಿ ಅಧ್ಯಕ್ಷರಿಗೆ ನಮ್ಮ ವರದಿ ಸಲ್ಲಿಸಲಾಗಿದೆ. ನಮ್ಮ ತಂಡಕ್ಕೆ ಶಹಬ್ಬಾಷ್‌ಗಿರಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ಎರಡನೇ ಹಂತದ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು.
ಈಗಾಗಲೇ ಕಾರಜೋಳ ಅವರ ಮೂಲಕ ವರದಿ ಸಲ್ಲಿಸಲಾಗಿದೆ ಎಂಬ ವಿಜಯೇಂದ್ರ ಹೇಳಿಕೆಗೆ, ಕಾರಜೋಳ ಇಲ್ಲೇ ಇದ್ದರು ಕೇಳಿದ್ದೀರಾ ಎಂದು ಮರು ಪ್ರಶ್ನಿಸಿದರು.
ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪ ಬಹಳಷ್ಟು ಹೋರಾಟ ಮಾಡಿದ ಬಳಿಕ ಆ ಸ್ಥಾನಕ್ಕೆ ತಲುಪಿದ್ದರು. ಅವರ ಮಗನಾಗಿ ಆ ಸ್ಥಾನ ತಲುಪಿದ್ದು ವ್ಯರ್ಥ. ಯಡಿಯೂರಪ್ಪನವರ ಹಿರಿತನ, ತ್ಯಾಗ ಮತ್ತು ಹೋರಾಟ ಮಂಕಾಗುತ್ತಿದೆ. ಈಗ ಅಧಿಕಾರ ಬಿಟ್ಟು ಕೊಟ್ಟು ಮುಂದೆ ಅನುಭವ ಪಡೆದ ಬಳಿಕ ಮತ್ತೆ ಅಧ್ಯಕ್ಷರಾಗಲಿ ಎಂದು ಸಲಹೆ ನೀಡಿದರು.
ವರಿಷ್ಠರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ. ಆದರೆ, ಆ ಹುಡುಗ ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಲಾಯಕ್ ಅಲ್ಲ ಎಂಬುದನ್ನು ನಾನು ಪದೇ ಪದೇ ಹೇಳಲು ಪ್ರಯತ್ನಿಸುತ್ತಿದ್ದೇನೆ. ಯಾವುದೋ ಒಂದು ಸಮಯದಲ್ಲಿ ಏನೋ ತಿಳಿದು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ವಿಜಯೇಂದ್ರ ನಡವಳಿಕೆ ಬಗ್ಗೆ ಹೈಕಮಾಂಡ್ಗೆ ತಿಳಿಸಿಕೊಟ್ಟಿದ್ದೇವೆ. ಮುಂದೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ. ಇನ್ನು ಅಧ್ಯಕ್ಷರ ಬದಲಾವಣೆ ಬಗ್ಗೆ ಮುಂದೆ ನೋಡೋಣ. ಅದನ್ನು ಮಾಧ್ಯಮಗಳ ಮುಂದೆ ಮಾತಾಡಲಾಗದು ಎಂದರು.
ಜಗದಾಂಭಿಕಾ ಪಾಲ್ ಅವರು ಹುಬ್ಬಳ್ಳಿ, ವಿಜಯಪುರ ಹಾಗೂ ಬೆಳಗಾವಿಗೆ ಭೇಟಿ ಕೊಟ್ಟಿದ್ದರು. ಆಗ, ವಿಜಯಪುರದಲ್ಲಿ ಉಪವಾಸ ಕೈಬಿಟ್ಟು ಪ್ರವಾಸ ಮಾಡಿ, ನೊಂದ ಜನರನ್ನು ಭೇಟಿಯಾಗಿ ವರದಿ ಸಿದ್ಧಪಡಿಸುವಂತೆ ಸಲಹೆ ಕೊಟ್ಟಿದ್ದರು. ಆ ಬಳಿಕವೇ ನಾವು ಜಿಲ್ಲಾ ಪ್ರವಾಸ ಶುರು ಮಾಡಿದೆವು. ಪ್ರವಾಸ ಮಾಡುವ ಮೊದಲೇ ವಿಜಯೇಂದ್ರ ಹೇಗೆ ವರದಿ ಕೊಡಲು ಸಾಧ್ಯ?. ಎಷ್ಟು ಸುಳ್ಳು ಹೇಳುತ್ತಾರೆ ಎಂಬುದು ಇದರಿಂದಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.
ವಿಜಯೇಂದ್ರ ಹತಾಶ ಭಾವನೆಯಿಂದ ರಾಜ್ಯಾಧ್ಯಕ್ಷ ಸ್ಥಾನ ನಡೆಸುತ್ತಿದ್ದಾರೆ. ವರಿಷ್ಠರು ಯಾರಿಗೂ ಸೂಚನೆ ನೀಡಿಲ್ಲ. ರಾಜನಾಥ್ ಸಿಂಗ್ ಸೇರಿ ಹಲವರನ್ನು ನಾವು ಭೇಟಿಯಾಗಿದ್ದೇವೆ. ವಕ್ಫ್ ಹೋರಾಟ ಮುಂದುವರೆಸಿ ಎಂದು ಹೇಳಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಬಳ್ಳಾರಿ, ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಹೋರಾಟ ಮಾಡುತ್ತೇವೆ. ನಾನೇ ಸ್ವತಃ ಅಲ್ಲಿಗೆ ಹೋಗಿ ಬಂದ ಬಳಿಕ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ವಿಜಯೇಂದ್ರ ನೇತೃತ್ವದ ವಕ್ಫ್ ಹೋರಾಟ ನಿಲ್ಲಲಿದೆ. ಮುಂದಿನ ಎರಡು ಜಿಲ್ಲೆಯಲ್ಲಿ ಹೋರಾಟ ನಿಲ್ಲಲಿದೆ. ಹೋದಲ್ಲೆಲ್ಲೆಡೆ ಜನ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಮಾಡಿದ ಕಡೆ ಯಾಕೆ ಅವರು ಪ್ರವಾಸ ಮಾಡುತ್ತಿದ್ದಾರೆ ಅಂತಾ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಜನತೆಗೆ ನಾನು ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ. ಫಡ್ನವಿಸ್ ಅವರನ್ನು ಅಪಮಾನ ಮಾಡಿ ಅಧಿಕಾರದಿಂದ ಕೆಳಗಿಳಿಸಿದರು. ನಾನು ಸಮುದ್ರ ಇದ್ದ ಹಾಗೆ, ವಾಪಸ್ ಹೋಗೋದು ಗೊತ್ತು. ರಭಸದಿಂದ ಬರೋದು ಗೊತ್ತು ಎಂದು ಹೇಳಿದ್ದರು. ಸಮುದ್ರದ ಬಳಿ ಮನೆ ಕಟ್ಟಬೇಡಿ ಎಂದಿದ್ದರು. ಅದೇ ರೀತಿಯಲ್ಲಿ ಮತ್ತೆ ಬಂದು ಫಡ್ನವಿಸ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯದಲ್ಲಿಯೂ ಮುಂದಿನ ಸಲ ಸ್ಪಷ್ಟ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲಾಗುತ್ತಿಲ್ಲ, ತಕ್ಷಣ ಕೆಳಗಿಳಿಸಬೇಕು: ರಮೇಶ್ ಜಾರಕಿಹೊಳಿ