ದಾವಣಗೆರೆ : ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಘೋಷಣೆಯಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಅವರ ವಿರುದ್ಧ ಎಂ ಪಿ ರೇಣುಕಾಚಾರ್ಯ ನೇತೃತ್ವದ ಅತೃಪ್ತ ಬಣ ಆಕ್ರೋಶ ವ್ಯಕ್ತಪಡಿಸಿದೆ. ಅಭ್ಯರ್ಥಿಯನ್ನು ಬದಲಿಸುವಂತೆ ಹೈಕಮಾಂಡ್ ಗಮನ ಸೆಳೆಯಲು ರೇಣುಕಾಚಾರ್ಯ ಅಂಡ್ ಟೀಂ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸದಲ್ಲಿ ಗೌಪ್ಯ ಸಭೆ ನಡೆಸಿದೆ.
ಈ ಸಭೆಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ್, ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಬಸವರಾಜ್ ನಾಯ್ಕ್, ದಾವಣಗೆರೆ ದಕ್ಷಿಣ ಪರಾಜಿತ ಅಭ್ಯರ್ಥಿ ಬಿ ಜಿ ಅಜಯ್ ಕುಮಾರ್, ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ಸಾಕಷ್ಟು ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಟಿಕೆಟ್ ನೀಡಿದ ಅಭ್ಯರ್ಥಿಯಾದ ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಬದಲಾಯಿಸಬೇಕು. ಆಕಾಂಕ್ಷಿಯಾದ ಡಾ. ರವಿಕುಮಾರ್ ಅವರಿಗೆ ಟಿಕೆಟ್ ಕೊಡ್ಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಗೆ ಚನ್ನಗಿರಿ, ಜಗಳೂರು, ಹರಪನಹಳ್ಳಿ, ದಾವಣಗೆರೆ, ಮಾಯಕೊಂಡ, ಹೊನ್ನಾಳಿ ವಿಧಾನಸಭಾ ಕ್ಷೇತ್ರದಿಂದ ಸಾಕಷ್ಟು ಮುಖಂಡರು ಸಭೆ ಸೇರಿ ಗೋ ಬ್ಯಾಕ್ ಸಿದ್ದೇಶ್ವರ್ ಎಂದು ಘೋಷಣೆ ಕೂಗಿದ್ದಾರೆ.
ರೇಣುಕಾಚಾರ್ಯ ಹೇಳಿದ್ದು ಇಷ್ಟು : ದಾವಣಗೆರೆ ಶಿರಮಗೊಂಡನಹಳ್ಳಿಯಲ್ಲಿ ಅತೃಪ್ತ ಬಿಜೆಪಿ ಮುಖಂಡರ ಸಭೆ ನಡೆಸಿದ ಬಳಿಕ ಎಂಪಿ ರೇಣುಕಾಚಾರ್ಯ ಮಾತನಾಡಿ, ಸಮೀಕ್ಷೆ ಜಿ ಎಂ ಸಿದ್ದೇಶ್ವರ್ ಅವರ ವಿರುದ್ಧವಾಗಿದೆ. ನೂರಕ್ಕೆ ನೂರರಷ್ಟು ಸಮೀಕ್ಷೆ ಅವರ ವಿರುದ್ಧವಾಗಿದೆ. ಡಾ ರವಿಕುಮಾರ್ಗೆ ಟಿಕೆಟ್ ನೀಡಬೇಕೆಂದು ಒಮ್ಮತದಿಂದ ಹೈಕಮಾಂಡ್ಗೆ ಮನವಿ ಮಾಡಿದ್ದೆವು. ಆದ್ರೆ ಜಿ ಎಂ ಸಿದ್ದೇಶ್ವರ್ ಬಂಡತನದಿಂದ ತಮ್ಮ ಕುಟುಂಬಕ್ಕೆ ಟಿಕೆಟ್ ಪಡೆದಿದ್ದಾರೆ ಎಂದರು.
ವೈದ್ಯರ ಮಗ ವೈದ್ಯನಾಗಲು ಎಂಬಿಬಿಎಸ್ ಮಾಡಬೇಕು. ಬರಿ ಸ್ಟೆತಸ್ಕೋಪ್ ಹಿಡಿದುಕೊಂಡ್ರೆ ನಕಲಿ ವೈದ್ಯನಾಗುತ್ತಾನೆ. ಅವರ ಮಗ ಹೆಂಡತಿಗೆ ಕೊಡೋಕೆ ದಾವಣಗೆರೆಗೆ ಅವರ ಕೊಡುಗೆ ಏನಿದೆ?. ಅವರ ಹೆಂಡತಿ ಮಗ ಬಿಜೆಪಿಗೆ ಜೈ ಎಂದು ಹೇಳಿದ್ದಾರಾ?. ಬಿಜೆಪಿಗೆ ಅವರ ಹೆಂಡತಿ ಮಗನ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.
ಗೂಂಡಾಗಿರಿ, ದಾದಾಗಿರಿ ನಡೆಯೋಲ್ಲ. ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಕೆಲವರಿಗೆ ಬೆದರಿಕೆ ಹಾಕಿದ್ದಾರೆ. ಅಮಿತಾ ಶಾ ಪಟ್ಟಿಯಲ್ಲಿ ಇವರ ಹೆಸರು ಇಲ್ಲ. ರವಿಕುಮಾರ್ಗೆ ನಾವು ಬುಕ್ ಆಗಿಲ್ಲ. ಶಾಮನೂರು ಕುಟುಂಬದ ವಿರುದ್ಧ ಸ್ಪರ್ಧಿಸಲು ನಮಗಷ್ಟೇ ಸಾಮರ್ಥ್ಯ ಇದೆ ಎಂದು ಹೈಕಮಾಂಡ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾವು ಬಿಜೆಪಿಯಲ್ಲಿ ಸಮರ್ಥರಿದ್ದೇವೆ. ಎಸ್ ಎ ರವೀಂದ್ರನಾಥ ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿದ ಭೀಷ್ಮ. ಇವರ ದುಡ್ಡಿದ್ದರೆ ಏನು ಬೇಕಾದರು ಮಾಡಬಹುದು ಎಂದು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಜಿ ಎಂ ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಮ್ಮ ಬೆಂಬಲವಿಲ್ಲ: ಎಂ ಪಿ ರೇಣುಕಾಚಾರ್ಯ