ಬೆಳ್ತಂಗಡಿ (ದಕ್ಷಿಣ ಕನ್ನಡ): ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ, ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮೊದಲ ಬಾರಿಗೆ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಭೇಟಿಯಾದ ರೇವಣ್ಣ, ಅವರೊಂದಿಗೆ ಮಾತುಕತೆ ನಡೆಸಿದರು. ಜಾಮೀನು ಸಿಕ್ಕ ಬೆನ್ನಲ್ಲೇ ಮೈಸೂರು ಚಾಮುಂಡೇಶ್ವರಿ ಸೇರಿದಂತೆ ಹಲವು ದೇವಾಲಯಗಳಿಗೆ ರೇವಣ್ಣ ಅವರು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.
ಧರ್ಮಸ್ಥಳ ಭೇಟಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ''ನಾನು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಭಕ್ತ. ಯಾವಾಗಲೂ ಸ್ವಾಮಿಯ ದರ್ಶನಕ್ಕೆ ಬರುತ್ತಿರುತ್ತೇನೆ. ಆದ್ದರಿಂದ ಇಂದೂ ಕೂಡ ಬಂದಿದ್ದೇನೆ. ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. 25 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ನನಗೆ ಕಾನೂನಿನ ಬಗ್ಗೆ ಗೌರವವಿದೆ. ದೇವರ ಮೇಲೆಯೂ ನಂಬಿಕೆಯಿದೆ. ಪ್ರಕರಣ ಕೋರ್ಟ್ನಲ್ಲಿರುವುದರಿಂದ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ'' ಎಂದರು.
''ಮಂಜುನಾಥ ಸ್ವಾಮಿ ಮೇಲೆ ನಂಬಿಕೆ ಇದೆ, ಸೋಮವಾರದಂದು ದೇವರ ದರ್ಶನ ಪಡೆದಿದ್ದೇನೆ. ಎಲ್ಲ ಕ್ಷೇತ್ರಗಳಿಗಿಂತ ಇಲ್ಲಿಯ ಬಗ್ಗೆ ನಂಬಿಕೆ ಇದ್ದು, ಎಲ್ಲವನ್ನೂ ಮಂಜುನಾಥನಿಗೆ ಬಿಡುತ್ತೇನೆ. ರಾಜ್ಯದ ಜನತೆ ಮೇಲೆ, ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ'' ಎಂದು ಹೇಳಿದರು.
ಇದೇ ಮೇ 30ರಂದು ಹಾಸನ ಚಲೋ ಎಂಬ ಕಾರ್ಯಕ್ರಮ ಇದೆಯಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಅಲ್ಲದೆ, ದೇವೇಗೌಡರು ಪತ್ರ ಬರೆದಿರುವ ಬಗ್ಗೆಯೂ ಕೂಡ, ''ಆ ಬಗ್ಗೆ ನನಗೆ ಗೊತ್ತಿಲ್ಲ'' ಎಂದು ಹೇಳುತ್ತ ತೆರಳಿದರು.
ಇದನ್ನೂ ಓದಿ: ಹಾಸನ: 20 ದಿನಗಳ ನಂತರ ತವರಿಗೆ ಆಗಮಿಸಿದ ಹೆಚ್.ಡಿ.ರೇವಣ್ಣ - H D Revanna