ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಇಂದು ಪೊಲೀಸ್ ವಶದಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ಪ್ಯಾಲೇಸ್ ರಸ್ತೆಯ ಕಾರ್ಲ್‌ಟನ್ ಭವನದಲ್ಲಿರುವ ಸಿಐಡಿಯ ಕೇಂದ್ರ ಕಚೇರಿಯಲ್ಲೇ ರೇವಣ್ಣ ಉಳಿದುಕೊಳ್ಳಬೇಕಿದ್ದು, ಇದಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ವಶಕ್ಕೆ ಪಡೆದ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ರೇವಣ್ಣ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿಐಡಿ ಕಚೇರಿಯ ಬಳಿಯಲ್ಲಿಯೇ ಪೊಲೀಸರು ಆಂಬ್ಯುಲೆನ್ಸ್ ನಿಯೋಜಿಸಿದ್ದಾರೆ. ನಾಳೆ ರೇವಣ್ಣ ಅವರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿರುವ ತನಿಖಾಧಿಕಾರಿಗಳು, ನಂತರ ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಹೆಚ್. ಡಿ. ರೇವಣ್ಣ ವಿರುದ್ಧ ಮಹಿಳೆಯ ಅಪಹರಣ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ರೇವಣ್ಣ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿದ್ದ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ನಿರಾಕರಣೆ ಬೆನ್ನಲ್ಲೇ ಹೆಚ್.ಡಿ. ರೇವಣ್ಣ ಬಂಧಿಸಿದ ಎಸ್ಐಟಿ - HD Revanna