ಕಲಬುರಗಿ: ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಕ್ರಾಸ್ ಬಳಿ ಶುಕ್ರವಾರ ನಡೆದಿದೆ. ಪಡಸಾವಳಗಿ ಗ್ರಾಮದ ವಿಶ್ವನಾಥ ಜಮಾದಾರ್ ಕೊಲೆಯಾದ ವ್ಯಕ್ತಿ.
ಶುಕ್ರವಾರ ಬೆಳಗ್ಗೆ ಮನೆಯಿಂದ ಮಗನನ್ನು ಶಾಲೆಗೆ ಬಿಟ್ಟು ಬರ್ತಿನಿ ಅಂತ ಬೈಕ್ ಮೇಲೆ ವಿಶ್ವನಾಥ ಹೋಗಿದ್ದರು. ಮಗನನ್ನ ಶಾಲೆಗೆ ಬಿಟ್ಟು ಜಿಡಗಾ ಕ್ರಾಸ್ ಬಳಿ ಬರುವಾಗ ಬೈಕ್ ಮೇಲೆ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಮೂರು ಗುಂಡುಗಳು ವಿಶ್ವನಾಥ ಅವರ ತಲೆಗೆ ತಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಜನ ರಸ್ತೆಯಲ್ಲಿ ಗುಂಡಿನ ದಾಳಿ ನಡೆಸಿದ್ದ ದುಷ್ಕರ್ಮಿಗಳು ವಿಶ್ವನಾಥ ಸಾವನ್ನಪ್ಪಿದ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ದಾರಿಹೋಕರು ನೋಡಿದ ಮೇಲೆ ವಿಶ್ವನಾಥ ಮೃತದೇಹ ಇರೋದು ಪತ್ತೆಯಾಗಿತ್ತು. ಯಾಕೆಂದ್ರೆ ಗಿಡ ಗಂಟಿ ಬೆಳೆದಿದ್ದರಿಂದ ಮೃತದೇಹ ಇರೋದು ಗೊತ್ತಾಗಿರಲಿಲ್ಲ. ಯಾವಾಗ ವಿಷಯ ಗೊತ್ತಾಯ್ತೋ ಸ್ಥಳಕ್ಕಾಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಖುದ್ದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿಯೇ ಘಟನೆ ನಡೆದಿರುವುದರಿಂದ ಸುತ್ತಲು ಯಾವುದೇ ಕುರುಹುಗಳು ಕಂಡಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಕೊಲೆಗೆ ರಾಜಕೀಯ ವೈಷಮ್ಯ ಕಾರಣವಾ ಅಥವಾ ವೈಯಕ್ತಿಕ ದ್ವೇಷವಾ ಎಂಬುದನ್ನು ಪತ್ತೆ ಹಚ್ಚಬೇಕಿದೆ. ಎಲ್ಲಾ ದಾರಿಯಲ್ಲೂ ಖಾಕಿಪಡೆ ತನಿಖೆ ನಡೆಸುತ್ತಿದೆ.
ಕೊಲೆಗಾರರು ಪಕ್ಕಾ ಪ್ಲಾನ್ ಮಾಡಿಯೇ ಕೃತ್ಯವೆಸಗಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ನಮಗೆ ನ್ಯಾಯ ಕೊಡಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆಳಂದ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಆಳಂದ ತಾಲೂಕಿನ ಕೋಲಿ ಸಮಾಜದ ಮುಖಂಡನ ಈ ಭೀಕರ ಹತ್ಯೆ ತಾಲೂಕಿನಲ್ಲಿ ಆತಂಕ ಮೂಡಿಸಿದೆ. ಪೊಲೀಸರ ತನಿಖೆಯಿಂದಲೇ ಕೊಲೆಯ ಸತ್ಯಾಸತ್ಯತೆ ಗೊತ್ತಾಗಬೇಕಿದೆ.
ಇದನ್ನೂ ಓದಿ: ರಾಜ್ಯದಲ್ಲಿ 906 ಸಂಗಾತಿ, ಪ್ರೇಮಿಗಳ ಹತ್ಯೆ: ಇಲ್ಲಿದೆ ಬೆಚ್ಚಿಬೀಳಿಸುವ ಅಂಕಿ - ಅಂಶಗಳು! - MURDERS IN KARNATAKA