ಶಿವಮೊಗ್ಗ: ಹಿಂದುತ್ವ, ಪಕ್ಷ ಉಳಿಸಬೇಕು, ಕುಟುಂಬ ರಾಜಕಾರಣ ದೂರವಾಗಬೇಕೆಂದು ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಬಿಜೆಪಿ ವರಿಷ್ಠರು ತಮ್ಮ ಮನೆಗೆ ಭೇಟಿ ನೀಡಿದ ವೇಳೆ ತಿಳಿಸಿರುವುದಾಗಿ ಹೇಳಿದರು.
ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಮೋಹನ್ ಅಗರವಾಲ್ ಅವರು ಹಾಗೂ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ನಮ್ಮ ಮನೆಗೆ ಬಂದಿದ್ದರು. ಅವರಿಗೆ ನಾನು ಯಾಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದೇನೆ ಎಂದರು. ಅವರು ಬಂಡಾಯ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿದರು. ಕಾಂತೇಶ್ಗೆ ಎಂಎಲ್ಸಿ ಮಾಡುವುದಾಗಿ ತಿಳಿಸಿದರು.
ಇದು ಎಂಎಲ್ಎ, ಎಂಪಿ ಮಾಡುವ ವಿಚಾರವಲ್ಲ. ಪಕ್ಷ ಶುದ್ಧೀಕರಣವಾಗಬೇಕು. ರಾಜ್ಯದ ಅನೇಕ ಕಾರ್ಯಕರ್ತರು ನೋವು ಅನುಭವಿಸುತ್ತಿದ್ದಾರೆ. ಅದು ಸರಿಯಾಗಬೇಕು. ಹಿಂದುತ್ವವಾದಿಗಳನ್ನು ತುಳಿಯುತ್ತಿದ್ದಾರೆ. ಅದು ಸರಿಯಾಗಬೇಕು. ನರೇಂದ್ರ ಮೋದಿಯವರ ಆಶಯದಂತೆ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಬದಲಾವಣೆ ಬರಬೇಕು. ನನ್ನ ಜೊತೆಗಿನ ಚರ್ಚೆಯನ್ನು ಬಿಜೆಪಿ ಹೈಕಮಾಂಡ್ಗೆ ಅವರು ತಿಳಿಸುತ್ತಾರೆ ಎಂದರು.
ಮೋದಿ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಿದರು. ನಾನು ಬರುವುದಿಲ್ಲ, ಚುನಾವಣೆಯಲ್ಲಿ ಗೆದ್ದು ಮೋದಿಗೆ ಬೆಂಬಲಿಸುವುದಾಗಿ ತಿಳಿಸಿದ್ದೇನೆ ಎಂದರು. ಮೋದಿಯನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಾನು ಜೊತೆಗಿರುವುದಾಗಿ ತಿಳಿಸಿದ್ದೇನೆ. ಇಡೀ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತರು, ಈಡಿಗರು ಸೇರಿದಂತೆ ನಾವೆಲ್ಲ ಹಿಂದೂಗಳು ನಿಮ್ಮ ಜೊತೆ ಎಂದಿದ್ದಾರೆ. ಹಿಂದುತ್ವ ಹಾಗೂ ಬಿಎಸ್ವೈ ಕುಟುಂಬದಿಂದ ಆದ ಅನ್ಯಾಯದ ಹಿನ್ನೆಲೆ ನನ್ನ ಚುನಾವಣೆ ಕೈ ಹಿಡಿಯುತ್ತದೆ ಎಂದರು.
ಈಶ್ವರಪ್ಪ ಮನವೊಲಿಸುವ ಬಿಜೆಪಿ ನಾಯಕರ ಹೇಳಿಕೆ ವಿಚಾರ: ಈಶ್ವರಪ್ಪ ಆಕ್ರೋಶದಿಂದ ಬಂಡಾಯ ಸ್ಪರ್ಧೆ ಮಾಡುತ್ತಾರೆ ಎಂಬ ನಂಬಿಕೆ ಬಿಜೆಪಿಯವರಲ್ಲಿ ಇಲ್ಲ. ನಾನು ಆಕ್ರೋಶದಿಂದ ಮಾತನಾಡುತ್ತಿಲ್ಲ. ಬಿಎಸ್ವೈ ಕುಟುಂಬದ ವ್ಯವಸ್ಥೆಯ ವಿರುದ್ಧ ಸ್ಪರ್ಧೆ ಮಾತನಾಡುತ್ತಿದ್ದೇನೆ. ಯಡಿಯೂರಪ್ಪ ಆರು ತಿಂಗಳು ಹಠ ಹಿಡಿದು ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದರು. ವಿಜಯೇಂದ್ರ ಲಿಂಗಾಯತ ಎಂದು ರಾಜ್ಯಾಧ್ಯಕ್ಷರನ್ನಾಗಿ ಮಾಡಿದರಾ? ಎಂದು ಪ್ರಶ್ನಿಸಿದರು.
ಪಂಚಮಸಾಲಿ ಲಿಂಗಾಯತ ಯತ್ನಾಳ್ ಬಗ್ಗೆ ಯಾಕೆ ಹಠ ಹಿಡಿಯಲಿಲ್ಲ. ಒಕ್ಕಲಿಗ ಸಿ. ಟಿ ರವಿಯನ್ನು ಯಾಕೆ ಮಾಡಲಿಲ್ಲ. ಶೋಭಾ ಕರಂದ್ಲಾಜೆಗೆ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಸಿ ಟಿ ರವಿಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸುತ್ತಾರೆ. ನಾನು ಹೋರಾಟ ನಡೆಸುತ್ತಿರುವುದೇ ಬಿಜೆಪಿಯಲ್ಲಿನ ಬದಲಾವಣೆಗಾಗಿ. ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಈಶ್ವರಪ್ಪ ಮನಸ್ಸಿನಲ್ಲಿರುವ ನೋವು ಬೇಗ ಪರಿಹಾರವಾಗಲಿ : ಆನಂದ ಗುರೂಜಿ