ಹುಬ್ಬಳ್ಳಿ : ಹಿಂದುಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಧು-ಸಂತರ ನೇತೃತ್ವದಲ್ಲಿ ನೂತನ ಸಂಘಟನೆಯನ್ನು ಹುಟ್ಟುಹಾಕಲು ಚಿಂತಿಸಲಾಗಿದೆ. ಅ. 20ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿಂದು ವಿವಿಧ ಸಮಾಜದ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ, ಹಿಂದುಳಿದ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಸಂಘಟನೆ ಹುಟ್ಟುಹಾಕಲಾಗಿದೆ. ಈ ಸಭೆಯಲ್ಲಿ 25ಕ್ಕೂ ಹೆಚ್ಚು ಸಾಧು-ಸಂತರು, ಸಾವಿರಕ್ಕೂ ಅಧಿಕ ವಿವಿಧ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಸಂಘಟನೆಗೆ ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಎಂದು ಹೆಸರಿಡಲು ಸಲಹೆ ನೀಡಿದ್ದಾರೆ. ಈ ಕುರಿತು ಅಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿಜಯೇಂದ್ರ ಎಳಸು : ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ರಾಜಕೀಯದಲ್ಲಿ ಇನ್ನೂ ಎಳಸು. ನಾವೆಲ್ಲರೂ ಪಕ್ಷವನ್ನು ಕಟ್ಟುವ ಸಂದರ್ಭದಲ್ಲಿ ವಿಜಯೇಂದ್ರ ಕಣ್ಣು ಬಿಟ್ಟಿರಲಿಲ್ಲ. ಬಿಜೆಪಿಯನ್ನು ಅನೇಕರು ಶ್ರಮವಹಿಸಿ ಕಟ್ಟಿದ ಮೇಲೆ ಮೋದಿ, ಅಮಿತ್ ಶಾ ಕೃಪಾಕಟಾಕ್ಷದಿಂದ, ಹೈಕಮಾಂಡ್ಗೆ ಮಂಕುಬೂದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ ಕೈಯಲ್ಲಿ ಇದೀಗ ಪಕ್ಷ ಸಿಲುಕಿ ಹಾಳಾಗುತ್ತಿದೆ ಎಂದು ಈಶ್ವರಪ್ಪ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಮುಡಾ ಹಗರಣ ಮುಚ್ಚಿಹಾಕಲು ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಜಾತಿಗಣತಿ ವರದಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು. ಈ ಮಾತು ಹೇಳಿ ಎಂಟು ವರ್ಷ ಕಳೆದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಅಲುಗಾಡುತ್ತಿರುವ ಸಿಎಂ ಕುರ್ಚಿ ಉಳಿಸಿಕೊಳ್ಳಲು ತಮ್ಮ ಪಕ್ಷದ ಶಾಸಕರ, ಸಚಿವರ ಮೂಲಕ ಜಾತಿಗಣತಿ ವಿಷಯವನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಆರೋಪಿದರು.
ಬ್ರಿಗೇಡ್ ನಿಲ್ಲಿಸಲ್ಲ, ಬಿಜೆಪಿಗೆ ಯಾವುದೇ ಕಾರಣಕ್ಕೂ ಸೇರಲ್ಲ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಿದ್ರೆ ಒಳ್ಳೆಯದು ಅಂತ ಹೇಳಿದ್ದಾರೆ. ಆರ್ಸಿಬಿ ಹೆಸರು ಬಾಗಲಕೋಟೆಯಲ್ಲಿ ಫೈನಲ್ ಮಾಡ್ತೇವೆ. ಈ ಸಮಾಜಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಂಘಟನೆ. ರಾಣಿ ಚೆನ್ನಮ್ಮ - ರಾಯಣ್ಣನದ್ದು ತಾಯಿ ಮಗನ ಸಂಬಂಧ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿಗಳು. ರಾಯಣ್ಣ ಬ್ರಿಗೇಡ್ ಮಾಡಿದ್ದೆವು. ರಾಯಣ್ಣ ಬ್ರಿಗೇಡ್ಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿತ್ತು. ಆದ್ರೆ ಯಡಿಯೂರಪ್ಪ ಅವರಿಗೆ ತಡೆದುಕೊಳ್ಳಲು ಆಗಲಿಲ್ಲ. ಅಮಿತ್ ಶಾ ನಿಲ್ಲಿಸುವಂತೆ ಹೇಳಿದ್ದರು. ಅನಿವಾರ್ಯವಾಗಿ ನಿಲ್ಲಿಸಿ, ತಪ್ಪು ಮಾಡಿದ್ದೆವು. ಈಗ ಆ ತಪ್ಪಿನ ಅರಿವಾಗಿದೆ. ಇನ್ಮುಂದೆ ಆ ರೀತಿ ಆಗುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಅಪ್ಪ, ಮಕ್ಕಳ ವಿರುದ್ಧ ಸೆಡ್ಡು ಹೊಡೆಯಲು ಲೋಕಸಭೆ ಚುನಾವಣೆಗೆ ನಿಂತೆ. ಪಕ್ಷ ಶುದ್ಧೀಕರಣ ಆಗಬೇಕು ಅನ್ನೋದೇ ನಮ್ಮ ಉದ್ದೇಶ. ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ. ನಮ್ಮ ಬ್ರಿಗೇಡ್ನ್ನು ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದರು.
ನಾನಾಗಲಿ, ನನ್ನ ಮಗನಾಗಲಿ ಚುನಾವಣೆಗೆ ನಿಲ್ಲಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಅವರೂ ನಮ್ಮ ಜೊತೆ ಬರ್ತಾರೆ. ಸಾಧು ಸಂತರ ನೇತೃತ್ವದಲ್ಲಿ ಬ್ರಿಗೇಡ್ ಚಟುವಟಿಕೆ ನಡೆಯುತ್ತೆ. ಇದಕ್ಕೂ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಎಲ್ಲ ಪಕ್ಷದವರಿಗೂ ಆಹ್ವಾನ ನೀಡ್ತೇವೆ. ಯಾವುದೇ ಪಕ್ಷದವರು ಬಂದ್ರೂ ಸೇರಿಸಿಕೊಳ್ತೇವೆ. ಒಂದು ಕಾಲದಲ್ಲಿ ಸಿದ್ಧಾಂತದ ಬಗ್ಗೆ ಚರ್ಚೆಗಳು ನಡೀತಿದ್ದವು. ಸಿದ್ದರಾಮಯ್ಯ, ಯಡಿಯೂರಪ್ಪ ಮೊದಲಾದವರು ಯಾವ ರೀತಿಯ ಪದ ಬಳಸ್ತಿದ್ದಾರೆ. ಇಡೀ ದೇಶ ನಿಮ್ಮನ್ನು ನೋಡ್ತಾ ಇದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೀತಿದೆ. ನನ್ನ ಸ್ವಾರ್ಥಕ್ಕೆ ಸಂಘಟನೆ ಬಳಸಿಕೊಳ್ಳಲ್ಲ. ಸಾಯೋವರೆಗೂ ಬಿಜೆಪಿಯಲ್ಲಿ ಇರ್ತೇವೆ ಅಂತ ಹೇಳುತ್ತಿದ್ದೆವು. ಆದ್ರೆ ಅಲ್ಲಿನ ಪರಿಸ್ಥಿತಿ ಹೇಗಿದೆ? ಶುದ್ಧೀಕರಣಕ್ಕೆ ಗಂಗಾ ಜಲ ತರೋ ವಿಚಾರ ಯತ್ನಾಳ್ ಅವರಿಗೆ ಗೊತ್ತು. ನೀವು ಅವರನ್ನೇ ಕೇಳಿ. ನಾನಾಗಲಿ, ನನ್ನ ಮಗನಾಗಲಿ ಚುನಾವಣೆಗೆ ನಿಲ್ಲಲ್ಲ ಎಂದು ಈಶ್ವರಪ್ಪ ಹೇಳಿದ್ರು.
ಇದನ್ನೂ ಓದಿ : ಈಶ್ವರಪ್ಪರನ್ನು ಮರಳಿ ಪಕ್ಷಕ್ಕೆ ಕರೆತರುವ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಿಲ್ಲ: ಬಿ.ವೈ. ವಿಜಯೇಂದ್ರ - B Y Vijayendra